ದೇವಸ್ಥಾನ ನೆಲಸಮ ಖಂಡಿಸಿ ಪ್ರತಿಭಟನೆ

28 vikram 3
Published on

ಧಾರವಾಡ: ಮುನ್ಸೂಚನೆ ನೀಡದೆ ದೇವಸ್ಥಾನ ಧ್ವಂಸಗೊಳಿಸಿದ ಜಿಲ್ಲಾಡಳಿತದ ಕ್ರಮ ಖಂಡಿಸಿ ಶ್ರೀರಾಮ ಸೇನಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿನ ಶಿವನ ದೇವಸ್ಥಾನವನ್ನು ಜಿಲ್ಲಾಡಳಿತ ಗುರುವಾರ ತೆರವುಗೊಳಿಸಿದೆ. ದೇವಾಲಯ ಸ್ಥಳಾಂತರಕ್ಕೆ ಅವಕಾಶ ನೀಡದೆ ನೆಲಸಮ ಮಾಡಿದ್ದು ಅಕ್ಷಮ್ಯ ಅಪರಾಧ. ಸರ್ಕಾರಿ ಜಾಗ ಒತ್ತುವರಿ ಮಾಡಿ ಸಾಕಷ್ಟು ಪ್ರಾರ್ಥನಾ ಮಂದಿರಗಳನ್ನು ನಿರ್ವಿುಸಿದ್ದರೂ ಅವುಗಳ ತೆರವಿಗೆ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾಡಳಿತ, ಹಿಂದುಗಳ ದೇವಸ್ಥಾನ ನೆಲಸಮ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಾಲಯ ನೆಲಸಮಗೊಳಿಸಿದವರು ಕೂಡಲೇ ಮರು ನಿರ್ಮಾಣ ಮಾಡಬೇಕು. ಬೇರೆ ಬೇರೆ ಧರ್ಮದ ಮಂದಿರಗಳು ಸರ್ಕಾರಿ ಜಾಗದಲ್ಲಿದ್ದರೂ ಅವುಗಳನ್ನು ತೆರವು ಮಾಡುವ ಧೈರ್ಯ ಇಲ್ಲ. ಆದರೆ, ಶಿವನ ದೇವಾಲಯವನ್ನು ತೆರವು ಮಾಡಿದ್ದಾರೆ. ಹೀಗಾಗಿ ಅದೇ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿ ಮನವಿಪತ್ರ ಸಲ್ಲಿಸಿದರು. ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ್, ಗಂಗಾಧರ ಕುಲಕರ್ಣಿ, ಪ್ರಕಾಶ ಕ್ಯಾರಕೊಪ್ಪ, ಪರಶುರಾಮ, ಮಹಾಲಿಂಗ ಐಗಳಿ, ದೀಪಕ, ವಿನೋದ ಕದಂ, ಭರತ ಸಾವಂತ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net