

ಧಾರವಾಡ: ನಗರದ ಶ್ರೀ ಉಳವಿ ಬಸವೇಶ್ವರ ಧರ್ಮ ಫಂಡ್ ಸಂಸ್ಥೆ ವತಿಯಿಂದ ಇಲ್ಲಿನ ಎಮ್ಮಿಕೇರಿ ವೃತ್ತದ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀ ಗಣೇಶ, ಶ್ರೀ ಭರಮಪ್ಪ, ಶ್ರೀ ಕರಿಯಮ್ಮದೇವಿ ದೇವಾಲಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಮಂಗಳವಾರ ನೆರವೇರಿಸಲಾಯಿತು.
ಬೆಳಗ್ಗೆಯಿಂದ ವಿಶೇಷ ಪೂಜೆ, ಮಂತ್ರ ಪಠಣ, ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಸ್ವಾಮೀಜಿ, ಅರನಾಳ ಬೃಹನ್ಮಠದ ಶ್ರೀ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಕೆ.ಎಂ. ಗೌಡರ, ಗೌರವ ಕಾರ್ಯದರ್ಶಿ ಬಸವರಾಜ ಸೂರಗೊಂಡ, ಎಂ.ಸಿ. ಪಾಟೀಲ, ಸುರೇಶ ಪಟ್ಟಣಶೆಟ್ಟಿ, ಎಸ್.ಬಿ. ಪಾಗದ, ಜಿ.ಬಿ. ಅಳಗವಾಡಿ, ಟಿ.ಎಲ್. ಪಾಟೀಲ, ಸುರೇಶ ಹೆಗ್ಗೇರಿ, ರಾಜು ಕೋಟಿ, ಎನ್.ಬಿ.ಗೋಲಣ್ಣವರ, ವಿ.ಎಫ್.ಉಳ್ಳಾಗಡ್ಡಿ, ಜಿ.ಟಿ.ಶಿರೋಳ, ಆಡಳಿತ ಮಂಡಳಿ ಸದಸ್ಯರು, ಭಕ್ತರು, ಇತರರು ಇದ್ದರು.