ದೇವರು ಹಾಗು ಜನರ ಆಶೀರ್ವಾದಿಂದ ಈ ಬಾರಿಯೂ ಗೆಲವು :ಪ್ರಜ್ವಲ್ ರೇವಣ್ಣ

Prajwal revanna
Published on

ಹಾಸನ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನ ನನ್ನನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ. ಒಂದು ದಿನವು ಕ್ಷೇತ್ರದಿಂದ ಹೊರಗೆ ಹೋಗಿಲ್ಲ. ನೊಂದ ಜನರಿಗೆ ಸಾಧ್ಯವಾದ ಮಟ್ಟಿಗೆ ನ್ಯಾಯ ಒದಗಿಸಿದ್ದೇನೆ. ದೇವರು ಹಾಗು ಜನರ ಆಶೀರ್ವಾದ ಇದ್ದರೆ ಮುಂದಿನ ದಿನಗಳಲ್ಲಿ ಗೆದ್ದು ಬರುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಅನುಕೂಲವಾಗುತ್ತದೆ.ಪ್ರಚಾರಕ್ಕೆ ಹೋದ ಕಡೆಯೆಲ್ಲ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಾಸನ ಟಿಕೆಟ್ ಬಿಜೆಪಿಗೆ ನೀಡಬೇಕೆಂದು ಪ್ರತಿಪಾದಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಅದು ಅವರ ಪಕ್ಷದ ವಿಚಾರ, ಅವರು ಕುಳಿತುಕೊಂಡು ಸರಿ ಮಾಡುವ ಕೆಲಸ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಯಾರಾದರೂ ಧ್ವನಿ ಎತ್ತಿದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತಾಡಿ ಬಗೆಹರಿಸುತ್ತಾರೆ. ಬಿಜೆಪಿ ನಾಯಕರು ಆ ವಿಚಾರವಾಗಿ ಮಾತಾಡಬೇಕು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಒಳ್ಳೆಯದಾಗುತ್ತದೆ ಎಂದು ದೆಹಲಿ ನಾಯಕರು ಸಹ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಸಣ್ಣಪುಟ್ಟ ಗೊಂದಲ ಬಗೆಹರಿಸುವ ಕೆಲಸವನ್ನು ಆ ಪಕ್ಷದ ನಾಯಕರು ಮಾಡುತ್ತಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 15ನೇ ಬಜೆಟ್ ನಿರಾಸೆ ಮೂಡಿಸಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದರು.ಗ್ಯಾರಂಟಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ ಹೊರತು ಅಭಿವೃದ್ಧಿಗೆ ಪೂರಕವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಯಾವ ಕೊಡುಗೆಯನ್ನು ನೀಡಿಲ್ಲ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ನಿರ್ಮಿಸಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅನುದಾನ ಸಿಗುವ ವಿಶ್ವಾಸವಿತ್ತು. ಜಿಲ್ಲೆಯಲ್ಲಿ ವಿವಿಧ ಯೋಜನೆಯಡಿ 15 ಸಾವಿರ ಬೋರವೆಲ್ ಕೊರೆಸಲಾಗಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲು ಅನುದಾನದ ಕೊರತೆಯಿದೆ. ಈ ಸರ್ಕಾರಕ್ಕೆ ರೈತರ ಮೇಲೆ ಪ್ರೀತಿ ಇದ್ದಿದ್ದರೆ ವಿದ್ಯುತ್ ಸಂಪರ್ಕಕ್ಕೆ ಅನುದಾನ ನೀಡುತ್ತಿತ್ತು. ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಸಂಪೂರ್ಣ ವಿಫಲವಾಗಿದೆ ಎಂದರು.

ನನ್ನ ಅವಧಿ ಕೆಲಸ ಬಗ್ಗೆ ಪುಸ್ತಕ ಬಿಡುಗಡೆ :
ಕಳೆದ ಐದು ವರ್ಷದ ಆಡಳಿತಾವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ನಾನು ಮಾಡಿರುವ ಕೆಲಸದ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 12.5 ಸಾವಿರ ಕೋಟಿ ರೂ. ಅನುದಾನ ನೀಡಿದೆ. ನನ್ನ ಆಡಳಿತಾವಧಿಯಲ್ಲಿ ಯಾವ ಯಾವ ಕೆಲಸಗಳಾಗಿವೆ ಎಂಬುದರ ಕುರಿತು ಪುಸ್ತಕವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದಲೇ ಬಿಡುಗಡೆ ಮಾಡಿಸುತ್ತೇನೆ. ದೇವೇಗೌಡರ ಆರೋಗ್ಯವಾಗಿದ್ದು, ಅವರ ಬಳಿ ದಿನಾಂಕ ನಿಗದಿಪಡಿಸಿ ಹಾಸನದಲ್ಲಿ ಪುಸ್ತಕ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net