ದೇವರು, ಧರ್ಮದ ಹೆಸರಲ್ಲಿ ಶೋಷಣೆ : ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿಕೆ

DSC_1505
Published on

ವಿಜಯವಾಣಿ ಸುದ್ದಿಜಾಲ ತುಮಕೂರು
ಮನಃಸಾಕ್ಷಿ, ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳದಿರುವುದೇ ನಿಜವಾದ ವೈಜ್ಞಾನಿಕ ಮನೋಧರ್ಮ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದ ಹೊರವಲಯದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಡಾ.ಎಚ್.ಎಂ.ಗಂಗಾಧರಯ್ಯ ಸ್ಮಾರಕ ಸಭಾಂಗಣದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ದೇವರು, ಧರ್ಮದ ಹೆಸರಿನಲ್ಲಿ ಹೆಚ್ಚು ಜನರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಮನುಷ್ಯನಿಗಿಂತ ಹೆಚ್ಚು ದೇವರುಗಳು ಶೋಷಣೆಗೊಳಗಾಗುತ್ತಿದ್ದಾರೆ. ಸಾಮಾಜಿಕ ಕೇಡು ಹಾಗೂ ಮೌಢ್ಯ ವಿರೋಧಿಸುವ ಕೆಲಸವನ್ನು ವೈಜ್ಞಾನಿಕ ಮನೋಧರ್ಮ ಉಳ್ಳವರು ಮಾಡಬೇಕಿದೆ ಎಂದರು.
ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು. ವಿದ್ಯಾವಂತರೇ ಮೂಢನಂಬಿಕೆಗಳನ್ನು ಪ್ರತಿಪಾದಿಸುತ್ತಿದ್ದು, ವಿದ್ಯಾವಂತರೆಲ್ಲಾ ವಿವೇಕವಂತರಲ್ಲ. ಅವಿದ್ಯಾವಂತರೆಲ್ಲಾ ಅವಿವೇಕಿಗಳಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಹಾಗಾಗಿ, ಶಿಕ್ಷಣದ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಬೇಕಿದೆ. ಆದರೆ, ಅಸಮಾನತೆ, ಅಮಾನವೀಯತೆ, ಅವಾಸ್ತವ ಅಂಶಗಳೇ ಹೆಚ್ಚು ಪ್ರಜ್ವಲಿಸುತ್ತಿವೆ. ಸ್ವಾತಂತ್ರ ಆಲೋಚನೆಯನ್ನು ಜನರು ಮರೆತಿರುವಂತೆ ಕಂಡು ಬರುತ್ತಿದ್ದು ಇವುಗಳ ಕುರಿತು ಪೂರ್ವಗ್ರಹ ರಹಿತ ಸಂವಾದ ಅಗತ್ಯವಿದೆ ಎಂದು ಬರಗೂರು ಸಲಹೆಯಿತ್ತರು.
ಮೌಢ್ಯಕ್ಕೆ ಹೆಚ್ಚು ಬಲಿಯಾಗುತ್ತಿರುವುದು ಮಹಿಳೆಯರು. ಇದರ ವಿರುದ್ಧ ಹೋರಾಟ ನಡೆಸುವಂತಹ ವೈಜ್ಞಾನಿಕ ಮನೋಧರ್ಮವನ್ನು ಈ ವೈಜ್ಞಾನಿಕ ಸಮ್ಮೇಳನ ಹುಟ್ಟು ಹಾಕಿ, ಆ ಮೂಲಕ ನೆಮ್ಮದಿ, ಶಾಂತಿಯ ಸಮ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿ ಎಂದು ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.
ನಾಗಮೋಹನ್‌ದಾಸ್ ಆಶಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಇಲ್ಲದೆ ವೈಜ್ಞಾನಿಕ ಮನೋಧರ್ಮ ಬೆಳೆಸಲು ಸಾಧ್ಯವಿಲ್ಲ. ಟೀಕಿಸುವವರನ್ನು ವಿಮರ್ಶೆ ಮಾಡುವವರನ್ನು ಪ್ರಶ್ನಿಸುವವರನ್ನು ಅಪರಾಧಿಗಳಂತೆ ಬಿಂಬಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಿಕೊಳ್ಳದ ಹೊರತು ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಿಲ್ಲ. ನಂಬಿಕೆ, ಮೂಢನಂಬಿಕಗಳ ನಡುವೆ ತದ್ವಿರುದ್ಧ ಅಂಶಗಳಿದ್ದರೂ ಕೊಲೆಯನ್ನೇ ನಂಬಿಕೆ ಎಂಬಂತೆ ಬಿಂಬಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಮಕೃಷ್ಣ-ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಪಸಿರಿ ಸ್ಮರಣ ಸಂಚಿಕೆಯನ್ನು ಭಾರತೀಯ ರೆಡ್‌ಕ್ರಾಸ್‌ನ ಎಸ್.ನಾಗಣ್ಣ ಬಿಡುಗಡೆಗೊಳಿಸಿದರು. ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜಿ.ಎಸ್.ಶ್ರೀಧರ್, ಕೆ.ದೊರೈರಾಜು, ಪರಿಷತ್ ಜಿಲ್ಲಾಧ್ಯಕ್ಷ ಡಾ.ಸಿ.ಎಸ್.ಮೋಹನ್‌ಕುಮಾರ್, ಡಾ.ಕೆ.ಜಿ.ರಾವ್, ಹಂಪಿನಕೆರೆ ರಾಜೇಂದ್ರ,
ಎಸ್.ರೇಣುಕಾ ಪ್ರಸಾದ್ ಉಪಸ್ಥಿತರಿದ್ದರು.

ಮುಂದಿನ ಪೀಳಿಗೆಗೆ ವೈಜ್ಞಾನಿಕ ಮನೋಧರ್ಮ ವರ್ಗಾಯಿಸಬೇಕು
ವೈಜ್ಞಾನಿಕ ಮನೋಧರ್ಮವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ಇದರ ಜತೆಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳೆವಣಿಗೆಯ ದುಷ್ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಂಡು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಕೃತಕ ಬುದ್ಧಿಮತ್ತೆಯಿಂದ ನಮ್ಮ ಕೈಯಲ್ಲಿರುವ ಮೊಬೈಲ್ ಉತ್ಪಾದಕ ಕಂಪನಿಗಳಿಗೆ ಗ್ರಾಹಕರನ್ನು ಹುಡುಕಿಕೊಡುವ ಸಾಧನಗಳಾಗಿ ಪರಿವರ್ತನೆಯಾಗಿವೆ. ನಮಗೆ ಗೊತ್ತಿಲ್ಲದೆ ನಮ್ಮ ಮಾಹಿತಿಯ ದತ್ತಾಂಶ ಕಳುವಾಗುತ್ತಿದೆ. ಈ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಶಿವಮೊಗ್ಗದಲ್ಲಿ ನಡೆದ ಮೊದಲ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರೂ ಆದ ಇಸ್ರೋ ಮಾಜಿ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್ ಹೇಳಿದರು.

ಯಶಸ್ಸು ಗಳಿಸಲು ಅನ್ಯ ಮಾರ್ಗಗಳಿವೆ. ಆದರೆ, ಬದುಕನ್ನು ಮೌಲ್ಯಯುತಗೊಳಿಸಿಕೊಳ್ಳಲು ಕಳ್ಳದಾರಿಗಳಿಲ್ಲ. ಇಂದಿನ ಶಿಕ್ಷಣ ಪದ್ಧತಿಯಿಂದ ಮಕ್ಕಳಲ್ಲಿ ಮಾನವೀಯತೆ, ಅಂತಃಕರಣ ಕಡಿಮೆಯಾಗುತ್ತಿದೆ. ನೈತಿಕ ಪ್ರಜ್ಞೆ ಮರೆಯಾಗುತ್ತಿದೆ. ಮೂರ್ತಿ ಪೂಜೆ ಆಧ್ಯಾತ್ಮಿಕತೆಯ ಆರಂಭವೇ ಹೊರತು ಅದೇ ಅಂತಿಮವಲ್ಲ. ಹಾಗಾಗಿ ಪ್ರತಿಯೊಬ್ಬರಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತೇವೆ. ಒಳ್ಳೆಯ ಗುಣಗಳನ್ನು ಉದ್ದೀಪನಗೊಳಿಸುವ ಕೆಲಸ ಆಗಬೇಕಿದೆ. ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ರಾಮಕೃಷ್ಣ-ವಿವೇಕಾನಂದ ಆಶ್ರಮ

ವೈಜ್ಞಾನಿಕ ಮನೋಧರ್ಮವೆಂಬುದು ಮನುಷ್ಯನಲ್ಲಿ ಮಾನವೀಯತೆ, ಅಂತಃಕರಣ, ಸಮಾನತೆ, ಸಹಬಾಳ್ವೆಯನ್ನು ಪ್ರತಿನಿಧಿಸುತ್ತದೆ. ಅದು ಏಕಮುಖಿಯಲ್ಲ. ಅದಕ್ಕೆ ಬಹುಮುಖಿ ಆಯಾಮವಿದೆ. ಆಸ್ತಿಕನಾಗಿದ್ದು, ನಾಸ್ತಿಕನ ಅಭಿಪ್ರಾಯ ಗೌರವಿಸುವ, ನಾಸ್ತಿಕನಾಗಿದ್ದು, ಆಸ್ತಿಕನ ಅಭಿಪ್ರಾಯ ಕೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇದನ್ನು ಬುದ್ಧ ಬಸವ, ಅಂಬೇಡ್ಕರ್, ಕುವೆಂಪು, ಗಾಂಧಿ, ಸ್ವಾಮಿ ವಿವೇಕಾನಂದ ಮಾಡಿ ತೋರಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net