ದೇವರು ಒಬ್ಬನೇ ಆರಾಧನೆ ಅನಂತ

1BK1
Published on

ಬಸವಕಲ್ಯಾಣ: ಮೂಲದಲ್ಲಿ ದೇವರು ಒಬ್ಬನೇ. ಆದರೆ ಭಕ್ತಿಯ ಪ್ರತೀಕವಾಗಿ ಅವನನ್ನು ಅನಂತ ಹೆಸರುಗಳಿಂದ ಆರಾಧಿಸುತ್ತೇವೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಶ್ರಾವಣ ಮಾಸದ ನಿಮಿತ್ತ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಹಾಗೂ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಸಹಯೋಗದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ಐದನೇ ವಿಶೇಷ ಉಪನ್ಯಾಸ ಮಾಲೆಯಲ್ಲಿ ಅವರು ಮಾತನಾಡಿದರು.
ಪ್ರಪಂಚದಲ್ಲಿರುವ ಒಬ್ಬ ದೇವನೇ ಶಿವ. ಆತ ನಿರ್ಗುಣ, ನಿರಾಕಾರ ಎಂದು ಜಗತ್ತಿನ ಪ್ರಥಮ ಜಗದ್ಗುರು ಶ್ರೀ ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಮೂಲಕ ಜಗತ್ತಿಗೆ ಸಾರಿ ಹೇಳಿದ್ದಾರೆ. ಬಸವಣ್ಣನವರು ತಮ್ಮ ವಚನದ ಮೂಲಕ ನಮಗೆ ಕನ್ನಡದಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದರು.
ಪುಣ್ಯಕೋಟಿ ಕಾಲೇಜು ಪ್ರಾಚಾರ್ಯ ಪ್ರೊ.ಸೂರ್ಯಕಾಂತ ಶೀಲವಂತ ಮಾತನಾಡಿ, ಗವಿಮಠ ೧೨ನೇ ಶತಮಾನಕ್ಕಿಂತ ಪೂರ್ವದ್ದು. ಜಗದ್ಗುರು ಶ್ರೀ ರೇವಸಿದ್ಧೇಶ್ವರರಿಂದ ಸ್ಥಾಪನೆಯಾಗಿದೆ. ಅವರ ವರಪ್ರಸಾದ ಜಗದ್ಗುರು ಶ್ರೀ ಘನಲಿಂಗ ರುದ್ರಮುನಿಗಳು ಪವಾಡಗೈದ ಪುಣ್ಯತಾಣ ಇದಾಗಿದೆ ಎಂದು ಗವಿಮಠದ ಚರಿತ್ರೆ ಹೇಳಿದರು.
ಅಲ್ತಾಫ್ ಅಲಿ ಮಾತನಾಡಿ, ಶ್ರಾವಣ ಹಾಗೂ ರಂಜಾನ್ ಎರಡೂ ಒಂದೇ ರೀತಿಯ ಪವಿತ್ರ ಮಾಸಗಳು. ಗವಿಮಠದ ಡಾ.ಅಭಿನವ ಸ್ವಾಮೀಜಿ ಸರ್ವಧರ್ಮ ಸಮನ್ವಯ ಹಾಗೂ ಸಮಾನತೆಯ ಪ್ರತಿಪಾದಕರು ಎಂದು ಬಣ್ಣಿಸಿದರು.
ಯುವ ಮುಖಂಡ ಅಮರ ಬಡದಾಳೆ ಮಾತನಾಡಿದರು. ರೆಡ್ಡಿ ಸಮಾಜದ ಅಧ್ಯಕ್ಷ ವಿಜಯಕುಮಾರ ರೆಡ್ಡಿ, ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಮಂಜೂರ್ ಪೇಶಮಾಮ್, ಗಿರಯ್ಯ ಸ್ವಾಮಿ, ರುದ್ರಮುನಿ ಚನ್ನೂರ, ಬಸವರಾಜ ಚಿರಡೆ, ಶಿವಾನಂದ ಪರ್ತಾಪುರೆ, ವಿಜಯಲಕ್ಷಿö್ಮÃ, ಹೇಮಾವತಿ, ಶಾಂತಾಬಾಯಿ, ಮಂಗಲಾ, ಪರಮೇಶ್ವರಿ ಇತರರಿದ್ದರು.
ಸಂಸ್ಥೆ ಅಧ್ಯಕ್ಷ ಬಸವಂತಪ್ಪ ಲವಾರೆ ಸ್ವಾಗತಿಸಿದರು. ಮುಖ್ಯಗುರು ರಮೇಶ ರಾಜೋಳೆ ನಿರೂಪಣೆ ಮಾಡಿದರು. ಪ್ರೊ.ರುದ್ರೇಶ್ವರ ಸ್ವಾಮಿ ಗೋರ್ಟಾ ಪ್ರಾರ್ಥನಾಗೀತೆ ಹಾಡಿದರು. ವಿದ್ಯಾರ್ಥಿ ಶರಣಬಸಪ್ಪ ಅಲಗುಡೆ ಮಂಗಳಾರತಿ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net