

ಚಿತ್ರದುರ್ಗ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಕೀಲ ದೇವರಾಜೇಗೌಡರನ್ನು ಹೊಳೆನರಸೀಪುರ ಪೊಲೀಸರು ಹಿರಿಯೂರಲ್ಲಿ ಶನಿವಾರ ಮುಂಜಾನೆ 1.30ರ ವೇಳೆ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿಂದ ದಾವಣಗೆರೆಯತ್ತ ಬಿಳಿ ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೇವರಾಜೇಗೌಡರನ್ನು ಹಾಸನ ಪೊಲೀಸರ ಮಾಹಿತಿ ಮೇರೆಗೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು, ಐಮಂಗಲ ಸಮೀಪ ಗುಯಿಲಾಳು ಟೋಲ್‌ಗೇಟ್ ಬಳಿ ರಾತ್ರಿ 8.30ರ ಸಮಯಕ್ಕೆ ವಶಕ್ಕೆ ಪಡೆದು ಹಿರಿಯೂರಿಗೆ ಕರೆದೊಯ್ದಿದ್ದರು.
ಬಳಿಕ ಕಾರಿನ ಸಹಿತ ದೇವರಾಜೇಗೌಡ ಅವರೊಂದಿಗಿದ್ದ ಇನ್ನಿಬ್ಬರನ್ನೂ ಹೊಳೆನರಸೀಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ಮತ್ತವರ ತಂಡ ದೇವರಾಜೇಗೌಡ ಮತ್ತಿತರರನ್ನು ತಡೆದಿದ್ದು, ಆನಂತರದಲ್ಲಿ ಮೂವರು ಪಿಎಸ್‌ಐ ಹಾಗೂ ಸಿಬ್ಬಂದಿ ಇದ್ದ ಹೊಳೆನರಸೀಪುರ ಪೊಲೀಸರ ತಂಡಕ್ಕೆ ಒಪ್ಪಿಸಿದೆ.
ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ದೇವರಾಜೇಗೌಡ ಬೆಂಗಳೂರಿಂದ ಗೋವಾಕ್ಕೆ ತೆರಳುತ್ತಿದ್ದಾಗಿ ಪೊಲೀಸ್ ಮೂಲಗಳು ಸಂಶಯ ವ್ಯಕ್ತಪಡಿಸಿವೆ.