ದೇವರಾಜೇಗೌಡ ಹೇಳಿಕೆ ಹಿಂದೆ ಯಾರ ಕೈವಾಡ ಇದೆ ತನಿಖೆಗೆ 'ಕೈ" ಆಗ್ರಹ

ದೇವರಾಜೇಗೌಡ ಹೇಳಿಕೆ ಹಿಂದೆ ಯಾರ ಕೈವಾಡ ಇದೆ ತನಿಖೆಗೆ 'ಕೈ" ಆಗ್ರಹ
Published on

ಹಾಸನ: ಬಿಜೆಪಿ ಮುಖಂಡ ದೇವರಾಜೇಗೌಡ ಅತ್ಯಾಚಾರದ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದರೂ ಮಾಧ್ಯಮಗಳಿಗೆ ಹೇಳಿಕೆ ನೀಡುರುವುದರ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಗರದ ಎಸ್‌ಪಿ ಕಚೇರಿಗೆ ತೆರಳಿದ ಕಾಂಗ್ರಸ್ ಮುಖಂಡರು ಮತ್ತು ಕಾರ್ಯಕರ್ತರು ದೇವರಾಜೇಗೌಡ ನ್ಯಾಯಾಲಯದ ಅನುಮತಿ ಇಲ್ಲದೆ ಮಾಧ್ಯಮಗಳಿಗೆ ಹೇಳಿಕೆ ನೀಡುರುವುದರ ಹಿಂದೆ ಯಾರಿದ್ದಾರೆ.ಆತನಿಗೆ ಪ್ರೇರಣೆ, ಬೆಂಬಲ ನೀಡಿದವರು ಯಾರು, ಇದರಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಪೆನ್‌ಡ್ರೈವ್ ಹಂಚಿಕೆ ಆರೋಪ ಹಾಗು ಅತ್ಯಾಚಾರದ ಪ್ರಕರಣದ ಆರೋಪಿಯಾಗಿರುವ ದೇವರಾಜೇಗೌಡ ಅವರನ್ನು ನ್ಯಾಯಾಲಯದ ಆದೇಶದ 3 ದಿನಗಳ ಪೊಲೀಸ್ ಕಸ್ಟಡಿಯ ಅವಧಿ ಮುಗಿದ ಬಳಿಕ ಮೇ.17 ರಂದು ಪುನಃ ನ್ಯಾಯಾಲಯಕ್ಕೆ ಹಾಜರುಪಡಿಸಲು ದೇವರಾಜೇಗೌಡ ಅವರನ್ನು ಕರೆತಂದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೆ 100 ಕೋಟಿ ಆಫರ್ ಕೊಟ್ಟಿದ್ದರು, 5 ಕೋಟಿ ಅಡ್ವಾನ್ಸ್ ಆಗಿ ಕಳುಹಿಸಿದ್ದರು ಎಂದು ಮಾಡಿರುವ ಆರೋಪವು ಕಪೋಲ ಕಲ್ಪಿತವಾಗಿದೆ. ಈ ರೀತಿ ಹೇಳಿಕೆ ನೀಡಲು ಆತನಿಗೆ ಪ್ರೇರಣೆ, ಬೆಂಬಲ ನೀಡಿದವರು ಯಾರು, ಇದರಲ್ಲಿ ಯಾರ ಕೈವಾಡ ಇದೆ ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ದೇವರಾಜೇಗೌಡ ಸುಖಾ ಸುಮ್ಮನೆ ಆರೋಪ ಮಾಡಲು ಯಾರು ಪ್ರೇರಣೆ ನೀಡಿದ್ದಾರೆ. ಯಾರು ಜೈಲಿನಲ್ಲಿದ್ದ ಸಮಯದಲ್ಲಿ ಮತ್ತು ಪೊಲೀಸ್ ಕಸ್ಟಡಿಯಲ್ಲಿದ್ದ ಅವಧಿಯಲ್ಲಿ ದೇವರಾಜೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪ್ರಭಾವಿ ವ್ಯಕ್ತಿಗಳು ಯಾರು, ಯಾವ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂಬ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಬೇಕು. ಅಲ್ಲದೇ ಒಂದೊಂದು ಕಾಲಕ್ಕೆ ಒಂದೊಂದು ರೀತಿಯ ಸುಳ್ಳು ಹೇಳಿಕೆ ನೀಡುವ ಮೂಲಕ ತನಿಖೆ ದಿಕ್ಕು ತಪ್ಪಿಸುತ್ತಿರುವ ಈ ವ್ಯಕ್ತಿಯನ್ನು ಬ್ರೈನ್ ಮ್ಯಾಪಿಂಗ್ ಮಾಡಬೇಕು. ಜೊತೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಲು ಅನುವು ಮಾಡಿಕೊಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಬಗ್ಗೆ ಕೂಡ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ, ಮುಖಂಡರಾದ ಬನವಾಸೆ ರಂಗಸ್ವಾಮಿ, ಗೊರೂರು ರಂಜಿತ್, ರಘು, ಚಂದ್ರಶೇಖರ್, ಶಿವಕುಮಾರ್, ಸುಜೀತ್ ನಾರಾಯಣ್, ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net