ಚಾಮರಾಜನಗರ: ತಾಲೂಕಿನ ಹೆಬ್ಬಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೇವರಾಜಪುರ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವೆಂದು ಘೋಷಣೆ ಮಾಡುವ ಸಂಬಂಧ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಂಬಾಕು ಮುಕ್ತ ಗ್ರಾಮದ ಸೂಚಕಗಳ ಅನುಷ್ಠಾನದ ಕುರಿತು ಮಂಗಳವಾರ ದೇವರಾಜಪುರ ಗ್ರಾಮದಲ್ಲಿ ಮೌಲ್ಯಮಾಪನ ನಡೆಸಲಾಯಿತು.
ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು, ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕಿನಿಂದ ಮುಕ್ತಗೊಳಿಸಲು, ತಂಬಾಕು ತ್ಯಜಿಸಲು ಇಚ್ಛಿಸುವ ವ್ಯಸನಿಗಳಿಗೆ ಅಗತ್ಯ ಆರೋಗ್ಯ ಚಿಕಿತ್ಸೆ, ಆಪ್ತ ಸಮಾಲೋಚನೆ ಹಾಗೂ ಔಷದೋಪಚಾರ ನೀಡುವ ಮೂಲಕ ತಂಬಾಕು ತ್ಯಜಿಸುವಂತೆ ಪ್ರೇರೇಪಿಸಲು ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಯುವ ಸಮುದಾಯವು ತಂಬಾಕು ಸೇವನೆಗೆ ಬಲಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ತಂಬಾಕು ಮುಕ್ತ ಗ್ರಾಮದ ಮಾರ್ಗಸೂಚಿಯನ್ನು ಹೊರಡಿಸಿ ಅನುಷ್ಠಾನಗೊಳಿಸಿದೆ.
ತಾಲೂಕಿನ ಹೆಬ್ಬಸೂರು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ, ದೇವರಾಜಪುರ ಗ್ರಾಮದಲ್ಲಿ ತಂಬಾಕು ಮುಕ್ತ ಗ್ರಾಮದ ಸೂಚಕಗಳನ್ನು ಅನುಷ್ಠಾನಗೊಳಿಸಿ, ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಿಸಲು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಗೆ ಪತ್ರದ ಮುಖೇನ ಕೋರಿರುವ ಮೇರೆಗೆ ಇಂದು ರಾಜ್ಯ ತಂಬಾಕು ನಿಯಂತ್ರಣ ಮಾರ್ಗದರ್ಶನದಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಹೆಚ್.ಎನ್ ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಚಂದಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಂದಿನಿ, ಹೆಬ್ಬಸೂರು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಂಜಿತಾ, ಚಾಮರಾಜನಗರ ಪೂರ್ವ ಪೋಲಿಸ್ ಠಾಣೆಯ ಪೋಲಿಸ್ ಉಪ ನಿರೀಕ್ಷಕರಾದ ಸೋಮೇಶ್, ದೇವರಾಜಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ರಾಜು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಮೌಲ್ಯಮಾಪನ ನಡೆಸಲಾಗಿದೆ.
ಮೌಲ್ಯಮಾಪನ ತಂಡವು ಗ್ರಾಮದ ವಿವಿಧ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ತಂಬಾಕು ಮುಕ್ತ ಗ್ರಾಮ ನಾಮಫಲಕ ಹಾಗೂ ತಂಬಾಕು ಮುಕ್ತ ವಲಯ ನಾಮಫಲಕಗಳನ್ನು ಪ್ರದರ್ಶನ ಮಾಡಿರುವುದನ್ನು ವೀಕ್ಷಿಸಿದರು. ಯಾವುದೇ ತಂಬಾಕು ಜಾಹೀರಾತು ಫಲಕಗಳು ಪ್ರದರ್ಶನ ಮಾಡಿಲ್ಲದಿರುವುದನ್ನು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಬೀಡಿ ಸಿಗರೇಟು ತುಂಡುಗಳು, ತಂಬಾಕು ಪೊಟ್ಟಣಗಳು ಇಲ್ಲದಿರುವುದನ್ನು ಖಾತರಿಪಡಿಸಿಕೊಂಡರು.
ಗ್ರಾಮದ ತಂಬಾಕು ನಿಯಂತ್ರಣ ರಾಯಭಾರಿಯಾದ ಬಸವೇಗೌಡ ಹಾಗೂ ಗ್ರಾಮದ ಜನರ ಅಭಿಪ್ರಾಯವನ್ನು ಪಡೆದು ಘೋಷಣಾ ಮಾನದಂಡಗಳಿಗೆ ಎಲ್ಲರ ಸಮ್ಮುಖದಲ್ಲಿ ಅಂಕಗಳನ್ನು ನೀಡಿ ಸದರಿ ಗ್ರಾಮವನ್ನು ಒಂದು ವರ್ಷಕ್ಕೆ ಸೀಮಿತವಾಗಿ ತಂಬಾಕು ಮುಕ್ತ ಗ್ರಾಮವೆಂದು ಘೋಷಣೆ ಮಾಡಲು ಚಾಮರಾಜನಗರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದ ಮುಖೇನ ಶಿಫಾರಸ್ಸು ಮಾಡುವುದಾಗಿ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.