ದೇವರಾಜ ಮಾರುಕಟ್ಟೆ ನೆಲಸಮದ ತೀರ್ಪಿನ ವಿರುದ್ಧ ಸುಪ್ರೀಂ ಮೊರೆ ಹೋಗಲು ಅರ್ಜಿದಾರರು, ಮಳಿಗೆದಾರರ ಸಿದ್ಧತೆ

DEVARAJAMARKET1
Published on

ಮೈಸೂರು: ನಗರದ ಐತಿಹಾಸಿಕ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡುವ ಸರ್ಕಾರದ ನಿಲುವು ಎತ್ತಿ ಹಿಡಿದಿರುವ ಹೈಕೋರ್ಟ್ ತೀರ್ಪಿನಿಂದ ಕಂಗಾಲಾಗಿರುವ ಮಾರಾಟಗಾರರು ಸುಪ್ರೀಂಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.
ಹೈಕೋರ್ಟ್ ತೀರ್ಪಿನ ಪ್ರತಿ ಕೈ ಸೇರಿದ ಬಳಿಕ ಅದರಲ್ಲಿನ ಅಂಶಗಳನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘ ನಿರ್ಧರಿಸಿದೆ. ಈ ಕುರಿತು ಆ.14ರಂದು ಸಭೆ ಕರೆದಿದ್ದು, ಸಭೆಯಲ್ಲಿ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳಲು ಉದ್ದೇಶಿಸಲಾಗಿದೆ.
ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡದಂತೆ ನಗರದ ಪಾರಂಪರಿಕ ಪ್ರಿಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಗುರುವಾರ ವಜಾ ಮಾಡಿ ತೀರ್ಪು ನಿಡಿದ್ದಾರೆ. ಈ ಮೂಲಕ ಶಿಥಿಲಾವಸ್ಥೆಯಲ್ಲಿರುವ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡಿ, ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡಬೇಕೆಂಬ ಸರ್ಕಾರದ ನಿಲುವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.
ನಗರದ ಹೃದಯ ಭಾಗದಲ್ಲಿರುವ ಅರಮನೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ದಿವಾನ್ ಪೂರ್ಣಯ್ಯ ನಾಲೆಯನ್ನು ಮುಚ್ಚಿ 1886ರಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಾಯಿತು. 1925 ರಲ್ಲಿ ಇದಕ್ಕೆ ದೇವರಾಜ ಒಡೆಯರ್ ಹೆಸರಿಟ್ಟ ಬಳಿಕ ಅಂದಿನಿಂದ ಇದು ದೇವರಾಜ ಮಾರುಕಟ್ಟೆ ಎಂದೇ ಹೆಸರಾಯಿತು.

3 ಬಾರಿ ಬೆಂಕಿಗೆ ಆಹುತಿಯಾಗಿತ್ತು
ಒಟ್ಟು 3.67 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮಾರುಕಟ್ಟೆಗೆ ಈಗ 137 ವರ್ಷವಾಗಿದೆ. ಇದು ಮೂರು ಬಾರಿ ಬೆಂಕಿಗೆ ಅಹುತಿ ಕೂಡಾ ಅಗಿತ್ತು. 1981ರಲ್ಲಿ 150 ಅಂಗಡಿ, 1990ರಲ್ಲಿ 175 ಅಂಗಡಿ ಹಾಗೂ 1990 ರಲ್ಲಿ 30 ಅಂಗಡಿಗಳು ಭಸ್ಮವಾಗಿದ್ದವು. ಅಲ್ಲದೇ 2016ರಲ್ಲಿ ದೇವರಾಜ ಮಾರುಕಟ್ಟೆಯ ಉತ್ತರದ್ವಾರ ತರಕಾರಿ ಮಾರಾಟ ಭಾಗದಲ್ಲಿ ಕುಸಿದು ಬಿದ್ದಿತ್ತು. ಮಾರುಕಟ್ಟೆಯ ಕಟ್ಟಡವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ದಿನ ಕಳೆದಂತೆ ಕಟ್ಟಡ ಕೆಲ ಭಾಗ ಶಿಥಿಲಾವಸ್ಥೆಯಲ್ಲಿದೆ.
ತಜ್ಞರ ಸಮಿತಿ ವರದಿ ನೀಡಿತ್ತು
ಶಿಥಿಲ ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸಬಹುದೆ ಅಥವಾ ಇಲ್ಲ ನೆಲಸಮ ಮಾಡಿ ಮರು ನಿರ್ಮಾಣ ಮಾಡಬೇಕೆ ಎನ್ನುವ ಕುರಿತು ವರದಿ ನೀಡುವಂತೆ ಎಸ್‌ಜೆಸಿಇ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ.ಸೈಯಿದ್ ಶಕೀಬ್ ಉರ್ ರೆಹಮಾನ್ ನೇತೃತ್ವದಲ್ಲಿ ಸರ್ಕಾರ ತಜ್ಞರ ಸಮಿತಿ ರಚಿಸಿತು. ನೂರು ವರ್ಷ ಪೂರೈಸಿರುವ ಶಿಥಿಲಾವಸ್ಥೆಯಲ್ಲಿರುವ ದೇವರಾಜ ಮಾರುಕಟ್ಟೆಯನ್ನು ನವೀಕರಣಗೊಳಿಸಲು ಸಾಧ್ಯವಿಲ್ಲ. ಇದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವುದು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಇದರ ವಿರುದ್ಧ ದೇವರಾಜ ಮಾರುಕಟ್ಟೆ ಮಳಿಗೆದಾರರು ಹೋರಾಟ ಮಾಡಿ, ಪಾರಂಪರಿಕ ಕಟ್ಟಡವನ್ನು ಕೆಡವದೆ ಹಾಗೆಯೇ ದುರಸ್ಥಿಗೊಳಿಸಬೇಕು ಎಂದು ಆಗ್ರಹಿಸಿದ್ದರು. ಈ ಹೋರಾಟಕ್ಕೆ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಹ ಬೆಂಬಲ ನೀಡಿದ್ದರು.
ಜೊತೆಗೆ ಪಾರಂಪರಿಕ ಪ್ರಿಯ ನಾಗರಿಕರಾದ ರಾಜಚಂದ್ರ, ಪ್ರೊ.ಸಿ.ಜಯದೇವರಾಜೇ ಅರಸ್ , ಗೌರಿಸತ್ಯ, ಯಶಸ್ವಿನಿ ಶರ್ಮ ಹಾಗೂ ನಿರಂಜನ್ ನಿಕ್ಕಂ ಸೇರಿ ಹಲವರು ದೇವರಾಜ ಮಾರಕಟ್ಟೆ ನೆಲಸಮ ಮಾಡದಂತೆ 2020ರಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು.
ನಗರದ ಕುಕ್ಕರಹಳ್ಳಿಕೆರೆ ಬಳಿ ಇರುವ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಸೆಂಟರ್ ಫಾರ್ ಫಿಲಾಸಫಿ ಪಾರಂಪರಿಕ ಕಟ್ಟಡ ಕೂಡ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ಮೈಸೂರು ವಿಶ್ವ ವಿದ್ಯಾನಿಲಯ ನವೀಕರಿಸಿ ಸಂರಕ್ಷಿಸಿದೆ. ಅದೇ ರೀತಿ ದೇವರಾಜ ಮಾರುಕಟ್ಟೆಯನನೂ ನವೀಕರಿಸಬಹುದು. ಈ ಮೂಲಕ ಮೈಸೂರಿನ ಪಾರಂಪರಿಕ ಕಟ್ಟಡ ಸಂರಕ್ಷಿಸಬೇಕು ಎಂದು ಬೆಂಗಳೂರಿನ ಬಿಎಂಎಸ್ ಕಾಲೇಜಿನ ತಜ್ಞ ಇಂಜಿನಿಯರ್‌ಗಳು ನೀಡಿದ್ದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು.
ರಾಜರ ಕಾಲದಲ್ಲಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಕಟ್ಟಡ ಸಂರಕ್ಷಿಸುವುದು ಅವಶ್ಯಕ. ವೈಜ್ಞಾನಿಕ ರೀತಿಯಲ್ಲಿ ನವೀಕರಣ ಮಾಡಬಹುದು ಎಂದು ಮಾರುಕಟ್ಟೆ ನೆಲಸಮಗೊಳಿಸುವ ಸರ್ಕಾರದ ತೀರ್ಮಾನಕ್ಕೆ ತಡೆಯಾಜ್ಞೆ ತಂದಿದ್ದರು.

ಮಾರುಕಟ್ಟೆಯನ್ನು ವೈಜ್ಞಾನಿಕ ರೀತಿಯಲ್ಲಿ ನವೀಕರಣ ಮಾಡಲು ಈಗ ತಜ್ಞ ಕೆಲಸಗಾರರು ಇಲ್ಲ. ಈ ಕಾರಣದಿಂದ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಸರ್ಕಾರ ಪರ ವಕೀಲರು ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ವಾದ ಮಂಡಿಸಿದರು.

ಪಾರಂಪರಿಕ ಶೈಲಿಯ ದೇವರಾಜ ಮಾರುಕಟ್ಟೆಯನ್ನು ಸಂರಕ್ಷಿಸಿ ಮೈಸೂರಿನ ಪಾರಂಪರಿಕತೆ ಉಳಿಸುವ ನಮ್ಮ ನಿಲುವಿಗೆ ತದ್ವಿರುದ್ಧ ತೀರ್ಪು ಬಂದಿದೆ. ಆದರೆ ಇಷ್ಟಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ. ತೀರ್ಪಿನ ಪ್ರತಿ ದೊರೆತ ಬಳಿಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು.
ರಾಜಚಂದ್ರ
ಅರ್ಜಿದಾರ

ಮಾರುಕಟ್ಟೆಯನ್ನು ನೆಲಸಮ ಮಾಡಿದರೆ ಪಾರಂಪರಿಕತೆ ಉಳಿಯುವುದಿಲ್ಲ. ಆದ್ದರಿಂದ ಮಾರುಕಟ್ಟೆ ಉಳಿಸುವ ನಿಟ್ಟಿನಲ್ಲಿ ಏನು ಕ್ರಮಕೈಗೊಳ್ಳಬೇಕು ಎಂದು ಮಳಿಗೆ ಮಾಲೀಕರು, ವರ್ತಕರ ಸಭೆ ನಡೆಸಲಾಗುವುದು. ಅಲ್ಲದೇ ನಗರದ ಸಂಘ, ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಎಸ್.ಮಹದೇವ
ಅಧ್ಯಕ್ಷ, ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net