ದೇವರಾಜ ಅರಸು ಆಡಳಿತ ಜಗತ್ತಿಗೆ ಮಾದರಿ: ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಣ್ಣನೆ

1692519692410
Published on

ಮೈಸೂರು: ಯಾವುದೇ ಜಾತಿ ಹಾಗೂ ಹಣದ ಬೆಂಬಲವಿಲ್ಲದೆ ಪ್ರಜಾಪ್ರಭುತ್ವವನ್ನು ಅನುಷ್ಠಾನಗೊಳಿಸಿ ದೇಶ ಮುನ್ನಡೆಸುವುದನ್ನು ದೇವರಾಜ ಅರಸು ತಮ್ಮ ಆಡಳಿತದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸರ 108ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ರಾಜಕೀಯ ಇಂದು ಜಾತಿ, ಹಣದ ಮೇಲೆ ನಿಂತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ, ಗೊಂದಲ ಸೃಷ್ಟಿ ಮಾಡಿ, ಸಂವಿಧಾನದ ಆಶಯಗಳಿಗೆ ಭಂಗ ಉಂಟುಮಾಡುತ್ತಿರುವ ಸಂದರ್ಭದಲ್ಲಿ ದೇವರಾಜ ಅರಸು ಅವರ ಆಡಳಿತ ಎಲ್ಲರಿಗೂ ಮಾದರಿಯಾಗಿದೆ. ಸಣ್ಣ ಸಮುದಾಯದಿಂದ ಬಂದ ಅವರು ಹಿಂದುಳಿದ, ದೀನ ದಲಿತರ ಏಳಿಗೆಗೆ ಕಾರ್ಯಕ್ರಮವನ್ನು ರೂಪಿಸಿದರು ಎಂದು ಹೇಳಿದರು.
ದೇಶದ ಬೆನ್ನೆಲುಬಾದ ರೈತರ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅರಸರು, ಗ್ರಾಮೀಣ ಬದುಕಿನ ಎಲ್ಲ ಮಜಲುಗಳನ್ನು ಅರ್ಥಮಾಡಿಕೊಂಡಿದ್ದರು. ಸಾಮಾಜಿಕ ಹೋರಾಟ, ಸಂಘರ್ಷ, ಸ್ವಾತಂತ್ರ್ಯ ಚಳವಳಿಯೊಂದಿಗೆ ಜನಸಾಮಾನ್ಯರ ಜತೆ ಬದುಕಿದ ಅನುಭವಗಳು ಅವರನ್ನು ಸಹಜವಾಗಿ ಮುತ್ಸದ್ಧಿಯಾಗಿ ಪರಿವರ್ತಿಸಿತು. ಅವರು ಮುಂದಿನ ಜನಾಂಗದ ಭವಿಷ್ಯದ ಬಗ್ಗೆ ಚಿಂತಿಸಿ ಸಾಮಾಜಿಕ ಬದುಕುಗಳ ಸ್ಥೂಲ ಪರಿಚಯದಿಂದ ಅನೇಕ ಬದಲಾವಣೆ ತಂದರು. ಹೀಗಾಗಿ ಅವರನ್ನು ರಾಜಕಾರಣಿ ಎನ್ನುವುದಕ್ಕಿಂತ ಸಮಾಜ ಸುಧಾರಕ, ಸಾಮಾಜಿಕ ಚಿಂತಕ, ಸಮಾಜಶಾಸ್ತ್ರದ ಶ್ರೇಷ್ಠ ವೈದ್ಯ ಎಂದು ಬಣ್ಣಿಸಿದರು.
ಅರಸರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶೋಷಣೆಗೆ ಒಳಗಾದ ಜನರ ಬದುಕನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬದಲಾವಣೆ ತರುವಂಥ ಐತಿಹಾಸಿಕ ನಿರ್ಧಾರಗಳನ್ನು ಮಾಡಿದರು. ಉಳುವವನೇ ಹೊಲದೊಡೆಯ, ಮಲಹೊರುವ ಪದ್ಧತಿ ನಿರ್ಮೂಲನೆ, ಇಪ್ಪತ್ತು ಅಂಶಗಳ ಕಾರ್ಯಕ್ರಮ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ನಿಗಮವನ್ನು ಸ್ಥಾಪಿಸಿಸುವ ಮೂಲಕ ಬಡವರ ಬದುಕನ್ನು ರೂಪಿಸಿದರು ಎಂದರು.
ಚಲನೆ ಇಲ್ಲದ ಸಮಾಜಕ್ಕೆ ಚಲನಶೀಲವನ್ನು ಉಂಟುಮಾಡಿ ಅಲೆ ಎಬ್ಬಿಸಿದರು. ಬಹಳಷ್ಟು ಸವಾಲುಗಳು ಎದುರಾದರೂ ಎ.ಜೆ.ಹಾವನೂರ ವರದಿ ಜಾರಿ ಮಾಡುವ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿ ಮಾಡಿದರು. ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಮುಕ್ತ ಅವಕಾಶ ನೀಡಿದರು. ಹೀಗಾಗಿ ಅವರು ರಾಜ್ಯದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಹೇಳಿದರು.
ಗುಣಾತ್ಮಕ ರಾಜಕೀಯ ನಾಯಕತ್ವ ಸೃಷ್ಟಿ ಮಾಡಿ ನೊಂದ ಜನರಿಗೆ, ಶೋಷಿತರು ಸೇರಿದಂತೆ ಎಲ್ಲ ಸಮುದಾಯದ ಬಡವರಿಗೆ ಅವರ ಆಡಳಿತ ಸ್ಮರಣೀಯವಾಗಿದೆ. ಅರಸು ಆಡಳಿತದಂತಹ ವಾತಾವರಣ ದೇಶದಲ್ಲಿ, ರಾಜ್ಯದಲ್ಲಿ ಮರುಕಳಿಸದಿದ್ದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿ, ಸಂವಿಧಾನಕ್ಕೆ ಗಂಡಾಂತರ ಎದರಾಗುತ್ತದೆ. ಸದ್ಯ ರಾಜ್ಯದಲ್ಲಿ ದೇವರಾಜ ಅರಸರ ಆಡಳಿತ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ನಮ್ಮ ಸರ್ಕಾರದ ಆಡಳಿತ ಒಂದೇ ರೀತಿಯಲ್ಲಿದೆ. ಅವರ ದಾರಿಯಲ್ಲೇ ನಾವು ಸಾಗುತ್ತಿದ್ದೇವೆ. ನಮ್ಮ ಯುವಕರು ಜಾತ್ಯತೀತ, ಪ್ರಜಾಪ್ರಭುತ್ವ, ಸಂವಿಧಾನಬದ್ಧ ನಡವಳಿಕೆ ಮೂಲಕ ಸ್ವಾತಂತ್ರ್ಯ ಉದ್ದೇಶ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದರು.
ಶಾಸಕ ತನ್ವೀರ್‌ಸೇಠ್ ಮಾತನಾಡಿ, ತಳ ಸಮುದಾಯದ ಕಷ್ಟಗಳನ್ನು ಕಣ್ಣಾರೆ ಕಂಡಿದ್ದ ದೇವರಾಜ ಅರಸು ಅವರು, ಹಾಸ್ಟೆಲ್‌ಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶದ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆ ಕಲಿಯುವಂತಾಯಿತು. ಇದರಿಂದ ಸಾಕಷ್ಟು ಜನರು ಉದ್ಯೋಗವಕಾಶ ದೊರೆತು ಜೀವನ ರೂಪಿಸಿಕೊಂಡಿದ್ದಾರೆ. ಇವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಎರಡು ಬಾರಿ ಮುಖ್ಯಮಂತ್ರಿಯಾಗಿ ಜನಾನುರಾಗಿ ಆಡಳಿತ ನೀಡಿದರೂ ದೇವರಾಜ ಅರಸು ಅವರ ಪ್ರತಿಮೆ ಮೈಸೂರಿನಲ್ಲಿ ಇಲ್ಲ ಎನ್ನುವುದು ಬೇಸರದ ಸಂಗತಿ. ನೂತನ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ ಅದಕ್ಕೊಂದು ಸ್ಪಷ್ಟರೂಪ ತರಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.
ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಶಿವಕುಮಾರ್, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಉಪ ಮೇಯರ್ ಡಾ.ಜಿ.ರೂಪಾ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ ಇತರರು ಇದ್ದರು.
ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಲ್ಲದೆ ಬೋಗಾದಿ ಹಾಸ್ಟೆಲ್‌ನ ಸಿದ್ದರಾಜು, ಹುಣಸೂರಿನ ಗೌರಮ್ಮ ಅವರನ್ನು ಉತ್ತಮ ಅಡುಗೆಯವರು ಎಂದು ಗುರುತಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net