

ವಿಜಯಪುರ: ದೇವರಹಿಪ್ಪರಗಿ ಮತಕ್ಷೇತ್ರದ ನಾನಾ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಚಿಮ್ಮಲಗಿ ಏತ ನೀರಾವರಿ ಯೋಜನೆಯ ನಾಗಠಾಣ ಉಪಕಾಲುವೆ ಮೂಲಕ ಕೆರೆಗಳಿಗೆ ನೀರು ಹರಿಸುವಂತೆ ಕೆಬಿಜೆಎನ್‌ಎಲ್ ಆಲಮಟ್ಟಿ ಮತ್ತು ರಾಂಪೂರ ವಿಭಾಗದ ಅಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸೂಚನೆ ನೀಡಿದರು.
ಬುಧವಾರ ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ ನೇತೃತ್ವದಲ್ಲಿ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮಸ್ಥರು ಭೇಟಿ ಮಾಡಿ ಮನವಿ ಮಾಡಿದ ಹಿನ್ನೆಲೆ, ಕೆಬಿಜೆಎನ್‌ಎಲ್ ಆಲಮಟ್ಟಿ ಮತ್ತು ರಾಂಪೂರ ವಿಭಾಗದ ಅಧಿಕಾರಿಗಳೊಂದಿಗೆ ಅವರು ಮಾತನಾಡಿದರು.
ದೇವರ ಹಿಪ್ಪರಗಿ, ಹರನಾಳ, ಇಂಗಳಗಿ,ಮುಳಸಾವಲಗಿ, ಕಡ್ಲೇವಾಡ ಪಿ.ಸಿಎಚ್. ಚಿಕ್ಕರೂಗಿ, ಗಂಗನಳ್ಳಿ, ನಿವಾಳಖೇಡ, ಅಂಕಲಗಿ, ಜಂಬಗಿ ಮುಂತಾದ ಗ್ರಾಮಗಳ ಕೆರೆಗಳಿಗೆ ನೀರು ಹರಿಸಬೇಕು. ಇದರಿಂದ ದೇವರಹಿಪ್ಪರಗಿ ಭಾಗದಲ್ಲಿ ಜನ ಮತ್ತು ಜಾನುವಾರುವಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು.
ಡಾ. ಪ್ರಭುಗೌಡ ಲಿಂಗದಳ್ಳಿ ಚಬನೂರ, ಅಜೀಜ್ ಯಲಗಾರ ಹಾಗೂ ಶಂಕರಗೌಡ ಕೋಟಿಖಾನೆ ಅವರು, ಎಂ. ಬಿ. ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಮಾಡಿರುವ ನೀರಾವರಿ ಯೋಜನೆಯಿಂದಾಗಿ ನಮ್ಮ ಭಾಗದ ರೈತರು ಗುಳೆ ಹೋಗುವುದು ತಪ್ಪಿದೆ. ಈ ಬಾರಿ ಬರ ಮತ್ತು ಕೆರೆಗಳಿಗೆ ನೀರು ಹರಿಸದ ಕಾರಣ ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿದೆ. ಕೂಡಲೇ ಕೆರೆಗಳಿಗೆ ನೀರು ಹರಿಸದಿದ್ದರೆ ಮತ್ತೆ ನಾವು ಗುಳೆ ಹೋಗುವ ಪರಿಸ್ಥಿತಿ ಎದುರಾಗಲಿದೆ ಎಂದು ಅಳಲು ತೋಡಿಕೊಂಡರು.
ಆಗ ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿದ ಸುನೀಲಗೌಡ ಪಾಟೀಲ ಅವರು, ಕೆಬಿಜೆಎನ್‌ಎಲ್ ಆಲಮಟ್ಟಿ ಮತ್ತು ರಾಂಪೂರ ವಿಭಾಗದ ಹಿರಿಯ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.
ರೈತ ಮುಖಂಡರಾದ ಬಸೀರ ಅಹ್ಮದ ಬೇಪಾರಿ, ಶ್ರೀಮಂತ ತಳವಾರ, ರೇವಣಯ್ಯ ಮಠ, ಸಾಹೇಬಗೌಡ ರೆಡ್ಡಿ, ಶಾಂತಗೌಡ ಕೊಣ್ಣೂರ, ಶ್ರೀಪತಿ ದಳವಾಯಿ, ಮಹಾದೇವಪ್ಪ ನಾಟೀಕಾರ, ನಿಂಗಣ್ಣ ಬಿರಾದಾರ, ಎ.ಎಂ. ಬಾಗವಾನ, ಡಾ. ಗುರುರಾಜ ಗಡೇದ, ಮುರ್ತುಜ ತಾಂಬೋಳಿ ಮತ್ತಿತರರಿದ್ದರು.