ದೇವರಹಿಪ್ಪರಗಿ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಿ

Devahipparagi Taluk, Vijayapura District, People's Opinion Poll, Indi District Headquarters,
ಜಿಲ್ಲೆಯ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ಜರುಗಿದ ದೇವರಹಿಪ್ಪರಗಿ ತಾಲೂಕು ಸಾರ್ವಜನಿಕರ ಸಭೆಯಲ್ಲಿ ಸದಯ್ಯನಮಠದ ವೀರಗಂಗಾಧರ ಶ್ರೀಗಳು ಮಾತನಾಡಿದರು. ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಮಾಜಿ ಶಾಸಕ ಶರಣಪ್ಪ ಸುಣಗಾರ, ತಹಸೀಲ್ದಾರ್ ಪ್ರಕಾಶ ಸಿಂದಗಿ ಇತರರಿದ್ದರು.
Published on

ದೇವರಹಿಪ್ಪರಗಿ: ದೇವರಹಿಪ್ಪರಗಿ ತಾಲೂಕು ಕೇಂದ್ರವನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಿ, ಇಲ್ಲವಾದಲ್ಲಿ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮುಂದುವರಿಸಿ ಎಂದು ತಾಲೂಕಿನ 17 ಸಂಘಟನೆಗಳು ಮನವಿ ಸಲ್ಲಿಸಿ, ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದವು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅಧ್ಯಕ್ಷತೆಯಲ್ಲಿ ಜರುಗಿದ ದೇವರಹಿಪ್ಪರಗಿ ತಾಲೂಕು ಸಾರ್ವಜನಿಕರ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಆರ್.ಆರ್.ನಾಯಿಕ ಹಾಗೂ ಸದಯ್ಯನಮಠದ ವೀರಗಂಗಾಧರ ಶ್ರೀಗಳು ಮಾತನಾಡಿ, ಮೊದಲು ನೂತನ 8 ತಾಲೂಕುಗಳಲ್ಲಿ ಎಲ್ಲ ಕಚೇರಿಗಳ ಕಾರ್ಯಾರಂಭಕ್ಕೆ ಸರ್ಕಾರ ಮುಂದಾಗಲಿ. ನಂತರ ನೂತನ ಜಿಲ್ಲೆಯ ರಚನೆ ಕುರಿತು ಯೋಚಿಸಲಿ ಎಂದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ತಾಲೂಕು ರೈತ ಸಂಘದ ಅಜೀಜ್ ಯಲಗಾರ, ಜೆಡಿಎಸ್ ಪಕ್ಷದ ಸಾಯಬಣ್ಣ ಬಾಗೇವಾಡಿ, ಪಟ್ಟಣ ಪಂಚಾಯಿತಿ ಸದಸ್ಯ ಕಾಶೀನಾಥ ಜಮಾದಾರ, ದಲಿತ ಸಂಘರ್ಷ ಸಮಿತಿಯ ಹುಯೋಗಿ ತಳ್ಳೋಳ್ಳಿ, ಪ್ರಕಾಶ ಗುಡಿಮನಿ, ಜಯ ಕರ್ನಾಟಕ ಸಂಘಟನೆಯ ರಹೆಮಾನ್ ಕಣಕಾಲ, ಶಿವಚಿದಂಬರ ಸೇವಾ ಸಮಿತಿಯ ಶ್ರೀಧರ ನಾಡಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ದೇವರಹಿಪ್ಪರಗಿ ತಾಲೂಕನ್ನು ಯೋಜಿತ ಇಂಡಿ ಜಿಲ್ಲೆಗೆ ಸೇರಿಸುವುದು ಬೇಡ, ನಮ್ಮ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲಿಯೇ ಮಂದುವರಿಸಬೇಕು ಇಲ್ಲವೇ ದೇವರಹಿಪ್ಪರಗಿಯನ್ನೇ ನೂತನ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಹೇಳಿದರು.

ಮಾಜಿ ಶಾಸಕ ಶರಣಪ್ಪ ಸುಣಗಾರ, ತಹಸೀಲ್ದಾರ್ ಪ್ರಕಾಶ ಸಿಂದಗಿ, ಸರಿತಾ ನಾಯಿಕ್, ಸುಮಂಗಲಾ ಸೇಬೆನವರ, ತಾಲೂಕು ಆಡಳಿತದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net