ಬಳ್ಳಾರಿ : ಆಂಧ್ರದ ಗಡಿಭಾಗದ ದೇವರಗುಡ್ಡದ ಮಾಳ ಮಲ್ಲೇಶ್ವರ ಕಲ್ಯಾಣೋತ್ಸವ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಬೆಳಗಿನ ವರೆಗೆ ನಡೆದ ದೇವರ ಉತ್ಸವದಲ್ಲಿ ಬಡಿದಾಟದಲ್ಲಿ 70ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ.
ಉತ್ಸವ ಮೂರ್ತಿಗಳನ್ನು ವಶಪಡಿಸಿಕೊಳ್ಳಲು 11 ಗ್ರಾಮಗಳ ಅಂದಾಜು 20 ಸಾವಿರಕ್ಕೂ ಹೆಚ್ಚು ಜನರು ಕೈಯಲ್ಲಿ ಬಡಿಗೆ ಹಿಡಿದು ಹೊಡೆದಾಡುವ ಸಂದರ್ಭದಲ್ಲಿ ಬೆಂಕಿಯ ಪಂಜುಗಳನ್ನು ತೂರಿದ್ದರಿಂದ ಹೆಚ್ಚಿನ ಜನರಿಗೆ ಗಾಯಗಳಾಗಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಳಮಲ್ಲೇಶ್ವರ ಸ್ವಾಮಿ ಕಾರ್ಣಿಕ : ಪ್ರತಿ ವರ್ಷದ ಕಾರ್ಣಿಕದ ನುಡಿಯನ್ನು ಮಳಮಲ್ಲೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಗಿರಿಮಲಯ್ಯಸ್ವಾಮಿ ಹೇಳಿದ್ದಾರೆ. “ದೇಶಕ್ಕೆ ಮಲ್ಲಿಗೆ ಹೂ ಒಗದಾಳ, ಚಿತ್ತ ಧ್ಯಾನ ಮಾಡಬೇಕು, ಗಂಗೇ ಹೊಳೆ ದಂಡಿಗೆ ನಿಂತಾಳ, ನಿಂತು ಬರುತ್ತಾಳಾ, 6700 ನಗಳ್ಳಿ(ಹತ್ತಿ), 3400 ಹೊಕ್ಕಳ ಜೋಳ, ಮೂರು ಆರಾದೀತು, ಆರು ಮೂರಾದೀತು” ಬಹು ಪರಾಕ್' ಎಂದು ಹೇಳಲಾಗಿದೆ. ಈ ನುಡಿಯನ್ನು ದೇವಸ್ಥಾನದ ವತಿಯಿಂದ ವಿಶ್ಲೇಷಣೆ ಮಾಡಲಾಗಿದ್ದು, 'ಹತ್ತಿ, ಜೋಳದ ಬೆಳೆಗಳು ಸಮೃದ್ಧವಾಗಲಿವೆ. ಶಾಂತಿ ನೆಲೆಸಲಿದೆ' ಎಂದು ಸುತ್ತಲಿನ ಗ್ರಾಮಸ್ಥರ ನಂಬಿಕೆ ಯಾಗಿದೆ.
ಕರ್ನೂಲ್ ಎಸ್ಪಿ ಮಾತನಾಡಿ, ಈ ಜಾತ್ರೆಯಲ್ಲಿ ಒಟ್ಟು 70 ಜನರಿಗೆ ಗಾಯಗಳಾಗಿದ್ದು, ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಆದೋನಿ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ