ದೇವರಕೊಲ್ಲಿಯಲ್ಲಿ ಬಾಲ ಸಂಸ್ಕಾರ ಶಿಬಿರ

Child burial camp at Devarakoli
Published on

ಮಡಿಕೇರಿ:

ದೇವರಕೊಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯ ಹಾಗೂ ಬಾಲ ಸಂಸ್ಕಾರ ಶಿಕ್ಷಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಬಾಲ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.

ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಿವೃತ್ತ ಅಧ್ಯಾಪಕ ಎಂ.ಎಸ್. ಶಿವರಾವ್ ನೇತೃತ್ವದಲ್ಲಿ ಕಳೆದ 12 ವಾರಗಳ ಕಾಲ ಪ್ರತಿ ಭಾನುವಾರ ಶಿಬಿರ ನಡೆಸಲಾಯಿತು. ದೇವರಕೊಲ್ಲಿ, ಮದೆ, 2ನೇ ಮೊಣ್ಣಂಗೇರಿ, ಜೋಡುಪಾಲ, ಕೊಯನಾಡು ಭಾಗದ 60 ಕ್ಕೂ ಹೆಚ್ಚು ಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕಾರ, ಆಚಾರ ವಿಚಾರ, ಶ್ಲೋಕ, ಯೋಗ ಮತ್ತು ದೇಶಭಕ್ತಿ ಗೀತೆಯನ್ನು ಹೇಳಿ ಕೊಡಲಾಯಿತು. ಬುದ್ದಿಯನ್ನು ಚುರುಕುಗೊಳಿಸುವ ಆಟಗಳ ಬಗ್ಗೆ ಶಿಬಿರದ ಗುರುಗಳಾದ 2ನೇ ಮೊಣ್ಣಂಗೇರಿ ಗ್ರಾಮದ ಧನಂಜಯ ಅಗೋಳಿಕಜೆ, ಎ.ಎ.ವಿಠಲ ಹಾಗೂ ಕೆ.ವಿ.ಗೀತಾ ತರಬೇತಿ ನೀಡಿದರು.

ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಸೇವಾ ಭಾರತಿಯ ಪ್ರಮುಖ ಡಿ.ಹೆಚ್.ತಿಮ್ಮಪ್ಪ, ಶಾಲಾ ಶಿಕ್ಷಣದೊಂದಿಗೆ ಸಂಸ್ಕಾರ ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲಾ ಗ್ರಾಮಗಳಲ್ಲಿಯೂ ಇಂತಹ ಶಿಬಿರಗಳು ನಡೆಯಬೇಕು ಎಂದು ಹೇಳಿದರು.

ಶ್ರೀಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಬಿ.ಜೆ. ಯಶೋಧರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಕಳಗಿ ರಮಾದೇವಿ ಸಂಪಾಜೆ, ಧನಂಜಯ ಅಗೋಳಿಕಜೆ, ವಿಠಲ ರಾಮಕೊಲ್ಲಿ, ಕೆ.ವಿ. ಗೀತಾ ಹಾಗೂ ದೇವಾಲಯದ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net