

ಹಿರೇಬಾಗೇವಾಡಿ: ಮಠಗಳಿಂದ ಧರ್ಮ ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಕಾಯಕದಿಂದ ಬಂದ ಲಾಭಾಂಶದಲ್ಲಿ ಜಂಗಮರಿಗೆ ಪ್ರಸಾದ ಮತ್ತು ದಾನ ಧರ್ಮ ಮಾಡಬೇಕು ಎಂದು ಸಮೀಪದ ಅರಳಿಕಟ್ಟಿ ತೋಂಟದಾರ್ಯ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಹೇಳಿದರು.
ಗ್ರಾಮದ ಜಗದ್ಗುರು ಮೌನೇಶ್ವರರ 15ನೇಯ ಜಯಂತ್ಯುತ್ಸವ ಮತ್ತು ಕಾಳಿಕಾದೇವಿ 26ನೇ ವಾರ್ಷಿಕೋತ್ಸವದ ನಿಮಿತ್ತ ಈಚೆಗೆ ವಿಶ್ವಕರ್ಮ ಸಮುದಾಯದ ಕಾಳಿಕಾದೇವಿ ಸೇವಾ ಅಭಿವದ್ಧಿ ಸಂಘದ ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವರ ಹೆಸರಿನಲ್ಲಿ ದುಂದು ವೆಚ್ಚ ಮಾಡುವುದರಿಂದ ನಮ್ಮ ದೇಶದ ಆರ್ಥಿಕತೆ ಕುಸಿಯುತ್ತದೆ. ಯುವಜನರು ಕುಲಕಸಬುಗಳಾದ ಕಮ್ಮಾರಿಕೆ, ಬಡಗಿತನ, ಪತ್ತಾರಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮೂಲ ಕುಲಕಸಬುಗಳೆಲ್ಲ ನಶಿಸಿ ಹೋಗುತ್ತಿವೆ. ಅವರಿಗೆ ಕಾಯಕದಲ್ಲಿ ಶ್ರದ್ಧೆ ಮೂಡಿಸಬೇಕಾಗಿದೆ ಎಂದರು.
ವಿಶ್ವಕರ್ಮರಿಂದ ನವಗ್ರಹ ಹೋಮ ಹವನ ನಡೆಯಿತು. ನಂತರ ದೇವರಿಗೆ ರುದ್ರಾಭಿಷೇಕ ಕಾರ್ಯಕ್ರಮ ನಡೆಯಿತು. ಗ್ರಾಮದ ಸುಮಂಗಲೆಯರಿಂದ ಮೌನೇಶ್ವರರನ್ನು ತೊಟ್ಟಿಲಲ್ಲಿ ಹಾಕುವುದು ಮತ್ತು ಸಾಮೂಹಿಕ ಉಪನಯನ, ಪಲ್ಲಕ್ಕಿ ಉತ್ಸವ, ಪುರವಂತರ ಸೇವೆ, ಮಹಾಪ್ರಸಾದ ಕಾರ್ಯಕ್ರಮಗಳು ಜರುಗಿದವು. ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಡೇಕೊಳ್ಳಮಠದ ನಾಗೇಂದ್ರ ಸ್ವಾಮೀಜಿ, ವೇದಮೂರ್ತಿ ಕಲ್ಲಯ್ಯಸ್ವಾಮಿ ಉದೇಶಿಮಠ, ಉಳವಪ್ಪಜ್ಜ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಜಪ್ತಿ, ಸಂಘದ ಅಧ್ಯಕ್ಷ ಕಲ್ಲಪ್ಪ ಪತ್ತಾರ, ಉಪಾಧ್ಯಕ್ಷ ಶ್ರೀಶೈಲ ಕಮ್ಮಾರ ಇತರರು ಇದ್ದರು.