ದೇವರ ಹೆಸರಲ್ಲಿ ಪ್ರಾಣಿ ಬಲಿ ಕೊಡಬೇಡಿ

WhatsApp Image 2023-12-18 at 14.34.22
Published on


ಯಾದಗಿರಿ: ದೇವರ ಹೆಸರಲ್ಲಿ ಪ್ರಾಣಿಗಳನ್ನು ಬಲಿಕೊಡುವಂತೆ ಯಾವ ಧರ್ಮಗಳಲ್ಲೂ ಹೇಳಿಲ್ಲ. ನಮ್ಮಲ್ಲಿನ ಅಜ್ಞಾನದಿಂದ ಮೂಕ ಪ್ರಾಣಿಗಳನ್ನು ಹಿಂಸಿಸಲಾಗುತ್ತಿದೆ ಎಂದು ಬೆಂಗಳೂರಿನ ಬಸವ ಧರ್ಮಪೀಠ ಹಾಗೂ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು.

ರಾಜ್ಯದಲ್ಲಿ ಪ್ರತಿವರ್ಷ ದೇವರ ಹೆಸರಲ್ಲಿ ಒಂದುವರೆ ಕೋಟಿ ಪ್ರಾಣಿಗಳನ್ನು ಬಲಿ ಕೊಡಲಾಗುತ್ತಿದೆ. ರಾಜ್ಯದ ಧಾಮರ್ಿಕ ದತ್ತಿ ಇಲಾಖೆಗೆ ಒಳಪಡುವ 36 ಸಾವಿರ ದೇವಾಲಯಗಳಿವೆ. ಅಲ್ಲಿಯೂ ಸಹ ಪ್ರಾಣಿಬಲಿ ನಿರಂತರವಾಗಿ ನಡೆಯುತ್ತಲೇ ಇದೆ. ಪ್ರಾಣಿಬಲಿ ವಿರುದ್ಧ ವ್ಯಾಪಕವಾದ ಜಾಗೃತಿ ಅವಶ್ಯಕತೆ ಇದೆ. 1959 ಕರ್ನಾಟಕ ಪ್ರಾಣಿಬಲಿ ಪ್ರತಿಬಂಧಕ ಅಧಿನಿಯಮದ ಪ್ರಕಾರ ಯಾವುದೇ ಜಾತ್ರೆ, ಉತ್ಸವ ಮತ್ತು ದೇವರ ಹೆಸರಲ್ಲಿ ಪ್ರಾಣಿ ಬಲಿ ನೀಡಿದರೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇದಲ್ಲದೆ ಹೈಕೋರ್ಟ್ ಸಹ ಪ್ರಾಣಿಬಲಿ ನಿಷೇಧಿಸಲು ಸರಕಾರಗಳಿಗೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗಳಿಗೆ ನಿದರ್ೇಶನ ನೀಡಿದೆ. ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ದೇವಮ್ಮ, ಪಾಲ್ಕಮ್ಮ ದೇವಿ ಹೆಸರಲ್ಲಿ ನಡೆಯುವ ಉತ್ಸವದಲ್ಲಿ ಕೋಣ, ಕುರಿಗಳನ್ನು ಬಲಿ ಕೊಡುವ ವಿಷಯ ಬೆಳಕಿಗೆ ಬಂದಿದ್ದು, ಇದರ ವಿರುದ್ಧ ನಾವೇ ಆ ಗ್ರಾಮಕ್ಕೆ ತೆರಳಿ ಜಾಗೃತಿ ಮೂಡಿಸುತ್ತೇವೆ ಎಂದರು.

ರಾಜ್ಯದಲ್ಲಿ ಗೋವಧೆ ಮಾಡುವಂತಿಲ್ಲ. ವಯಸ್ಸಾದ ಆಕಳುಗಳನ್ನು ಸಹ ಮಾರಾಟ ಮಾಡುವಂತಿಲ್ಲ. ಪ್ರಾಣಿಬಲಿ ಅನಾಗರಿಕ ಮತ್ತು ಅವೈಜ್ಞಾನಿಕವಾಗಿದೆ. ಮೌಢ್ಯದಿಂದ ಇಂದು ದೇವಾಲಯಗಳನ್ನು ವಧಾಲಯಗಳನ್ನಾಗಿ ಮಾಡಲಾಗುತ್ತಿದೆ. ರಕ್ತದ ಹೊಳೆ ಸುರಿಸಿ, ಇಡೀ ಪರಿಸರ ನಾಶ ಮಾಡಲಾಗುತ್ತಿದೆ. ಇದು ಮೊದಲು ನಿಲ್ಲುವಂತಾಗಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಭಾಗದ ಜನತೆ ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಯುವಕರು ಜಾಗೃತರಾಗಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ಪಾಲನೆ ಮಾಡಿದಾಗ ಇಂಥ ಅನಿಷ್ಠ ಪದ್ಧತಿಗಳಿಗೆ ಬ್ರೇಕ್ ಹಾಕಲು ಸಾಧ್ಯ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net