ದೇವರ ವಿಗ್ರಹಗಳ ಮರು ಪ್ರತಿಷ್ಠಾಪನೆ

11111
Published on

ಬಂಗಾರಪೇಟೆ: ಕಳೆದ ಐದು ವರ್ಷಗಳ ಹಿಂದೆ ಆಂಧ್ರದ ಕಡೆ ಸುತ್ತಾಡಿಕೊಂಡು ಬಂದು ಕೋಣೆಯೊಂದರಲ್ಲಿ ಬಂಧನವಾಗಿದ್ದ ಬ್ಯಾಟರಾಯ, ಶ್ರೀದೇವಿ, ಭೂದೇವಿ ದೇವರ ಮೂಲ ವಿಗ್ರಹಗಳಿಗೆ ಕೊನೆಗೂ ಮೋಕ್ಷ ಸಿಕ್ಕಿದೆ.

ತಾಲೂಕಿನ ದೊಡ್ಡೂರು ಕರಪನಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಟ್ಟದ ಮೇಲೆ ನೆಲೆಗೊಂಡಿರುವ ಮುಜರಾಯಿ ಇಲಾಖೆಯ ಬ್ಯಾಟರಾಯಸ್ವಾಮಿ ದೇವರ ವಿಗ್ರಹಗಳು ಸಣ್ಣದಾಗಿರುವ ಹಿನ್ನೆಲೆಯಲ್ಲಿ ತೆರುವುಗೊಳಿಸಿ ಎತ್ತರದ ವಿಗ್ರಹಗಳನ್ನು ದೇವಸ್ಥಾನ ಅಭಿವೃದ್ಧಿ ಸಮಿತಿ ಅವರು ಪ್ರತಿಷ್ಠಾಪನೆ ಮಾಡಿದ್ದರು. ಬೆಟ್ಟದ ಮೇಲೆ ಉದ್ಬವಗೊಂಡಿದ್ದ ಮೂಲ ದೇವರ ವಿಗ್ರಹಗಳನ್ನು ತೆರುವುಗೊಳಿಸಿ ಬೇರೆ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿರುವ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿತ್ತು.

ಈ ಸಂಬಂಧ ಗ್ರಾಮದ ಹಲವರು ಮುಜರಾಯಿ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿ ಮೂಲ ವಿಗ್ರಹಗಳನ್ನು ಪತ್ತೆ ಮಾಡಿ ಮತ್ತೇ ಮೂಲ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ದೂರು ಸಲ್ಲಿಸಿದ್ದರು. ಈ ವಿವಾದ ನ್ಯಾಯಾಲಯ ಮೆಟ್ಟಿಲು ಏರಿತ್ತು. ಮೂಲ ದೇವರ ವಿಗ್ರಹಗಳು ತೀವ್ರ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಹಿಂದಿನ ತಹಸೀಲ್ದಾರ್​ ಆಂಧ್ರದ ಕುಪ್ಪಂ ಬಳಿ ಇದ್ದ ವಿಗ್ರಹಗಳ ಮಾಹಿತಿ ಪಡೆದು ವಾಪಸ್​ ತಂದು ದೇವಾಲಯದ ಆವರಣದಲ್ಲಿನ ಕೋಣೆಯೊಂದರಲ್ಲಿಟ್ಟು ಬೀಗ ಹಾಕಿ ಭದ್ರಪಡಿಸಲಾಗಿತ್ತು.

ಆದರೆ ಆ ಸಮಯದಲ್ಲಿ ತಹಸೀಲ್ದಾರ್​ ಮುಜರಾಯಿ ಅಧಿಕಾರಿಗಳಿಗೆ ಬೀಗದ ಕೈ ನೀಡದೆ ಅವರ ಬಳಿಯೇ ಇಟ್ಟುಕೊಂಡಿದ್ದರು. ಈಗ ಪುನರ್​ ಪ್ರತಿಷ್ಠಾಪನೆ ಮಾಡಲು ಬೀಗದ ಕೈ ಸಿಗದೆ ಕೋಣೆ ಬಾಗಿಲು ತೆಗೆಯಲು ಮುಜರಾಯಿ ಇಲಾಖೆ ಇಒ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ ಮೂಲ ಸ್ಥಳದಲ್ಲೇ ಮೂಲ ವಿಗ್ರಹಗಳು ಪ್ರತಿಷ್ಠಾಪನೆ ಮಾಡಬೇಕೆಂದು ಮುಜರಾಯಿ ಇಲಾಖೆ ಆಯುಕ್ತರ ಮೇಲೆ ಕಳೆದ ಎರಡು ವರ್ಷಗಳಿಂದ ಪದೇಪದೆ ಒತ್ತಡಗಳನ್ನು ತಂದ ಹಿನ್ನೆಲೆಯಲ್ಲಿ 2025ರ ಫೆ.28 ರಂದು ಹಳೇ ವಿಗ್ರಹಗಳನ್ನು ಪುನರ್​ ಪ್ರತಿಷ್ಠಾಪನೆ ಮಾಡಲು ಆದೇಶಿಸಿದ್ದರು. ಈ ಆದೇಶ ಮೇರೆಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿ ಆದೇಶ ಮಾಡಿದ್ದರು.

ಜಿಲ್ಲಾಧಿಕಾರಿಗಳ ಆದೇಶದಂತೆ ಜೂ.18 ರಂದು ಹಳೇ ವಿಗ್ರಹಗಳ ಮತ್ತೆ ಪ್ರತಿಷ್ಠಾಪನೆಗೆ ಮುಜರಾಯಿ ಇಲಾಖೆ ಇಒ ಸೆಲ್ವಮಣಿ ಎಲ್ಲ ಸಿದ್ಧತೆಗಳನ್ನು ತೆಗೆದುಕೊಂಡಿದ್ದರು. ಆದರೆ ಕೋಣೆಯಲ್ಲಿದ್ದ ವಿಗ್ರಹಗಳನ್ನು ತೆಗೆದುಕೊಂಡು ಬರಲು ಬೀಗ ಇಲ್ಲದ ಕಾರಣ ತಹಸೀಲ್ದಾರ್​ ಸೂಚನೆಯಂತೆ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಸ್ಥಳದಲ್ಲೇ ಇದ್ದು, ಕೋಣೆಗೆ ಹಾಕಿದ್ದ ಬೀಗ ತೆರೆದು, ಹಳೇ ವಿಗ್ರಹಗಳನ್ನು ನೂತನ ವಿಗ್ರಹಗಳ ಮುಂದೆ ಪುನರ್​ ಪ್ರತಿಷ್ಠಾಪನೆ, ಮಹಾಸಂಪ್ರೋಕ್ಷಣೆ, ಅಷ್ಟಬಂಧನ ಮತ್ತು ಕುಂಬಾಭಿಷೇಕ ನೆರವೇರಿಸಲಾಯಿತು.

ಒಟ್ಟಿನಲ್ಲಿ ಐದು ವರ್ಷ ಕೋಣೆಯಲ್ಲಿ ಬಂಧಿಯಾಗಿ ಮತ್ತೆ ಮೂಲ ಸ್ಥಳಕ್ಕೆ ಬ್ಯಾಟರಾಯ, ಶ್ರೀದೇವಿ, ಭೂದೇವಿ ವಿಗ್ರಹಗಳು ಸೇರಿರುವುದು ದೈವ ಪವಾಡವಾಗಿದೆ.

2019ರಲ್ಲಿ ಮೂಲ ಹಳೆ ವಿಗ್ರಹಗಳನ್ನು ತೆಗೆದು ಅಭಿವೃದ್ಧಿ ಸಮಿತಿ 2019ರಲ್ಲಿ ನೂತನ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗಿತ್ತು. ಹಳೆ ವಿಗ್ರಹಗಳ ತೆರುವು ಬಗ್ಗೆ ಹಲವರು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಮೂಲ ಹಳೇ ವಿಗ್ರಹಗಳನ್ನು ನೂತನ ವಿಗ್ರಹಗಳ ಮುಂದೆ ಇಟ್ಟು ಪ್ರತಿಷ್ಠಾಪನೆ ಮಾಡಲಾಗಿದೆ. > ಸೆಲ್ವಮಣಿ ಇಒ, ಮುಜರಾಯಿ ಇಲಾಖೆ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net