ದೇವರ ಮೂರ್ತಿ ಕದ್ದವನನ್ನು ಪೊಲೀಸರಿಗೆ ಒಪ್ಪಿಸಿದ ಜನ

27-klg-4 theft
Published on

ಕಲಘಟಗಿ: ಶ್ರೀ ಬಸವಣ್ಣ ದೇವಸ್ಥಾನದಲ್ಲಿನ ಪಂಚಲೋಹ ಮೂರ್ತಿ ಕದ್ದು ಪರಾರಿಯಾಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಅರಳಿಹೊಂಡ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯ ಲಾಗಾಂವ ಗ್ರಾಮದ ರವಿ ರಾಮರಾವ ಮೋರೆ ಎಂಬಾತ ಬೆಳಗಿನ ಜಾವ ಗ್ರಾಮದಲ್ಲಿ ತಿರುಗಾಡುತ್ತಿದ್ದ. ಚಲನವಲನ ಬಗ್ಗೆ ಅನುಮಾನಗೊಂಡ ಗ್ರಾಮದ ಕೆಲವರು ವಿಚಾರಣೆಗೆ ಮುಂದಾದಾಗ ಆತನ ಬಳಿ ಪಂಚಲೋಹದ ಮೂರ್ತಿ ಕಂಡು ಬಂದಿದೆ. ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಸಿಪಿಐ ಪ್ರಭು ಸುರಿನ್ ತನಿಖೆ ನಡೆಸುತ್ತಿದ್ದಾರೆ.

ಮಂಗಳವಾರ ರಾತ್ರಿ ಗ್ರಾಮದ ಕೆಲವರ ಮನೆಯಲ್ಲಿ ಭಿಕ್ಷಾನ್ನ ಪಡೆದಿದ್ದ. ಬಳಿಕ ಬಸವಣ್ಣ ದೇವಸ್ಥಾನದಲ್ಲಿ ಊಟ ಮಾಡಿ ಅಲ್ಲಿಯೇ ಮಲಗಿದ್ದ. ಬೆಳಗಿನ ಜಾವ ದೇವಸ್ಥಾನದ ಬಾಗಿಲ ಕೀಲಿ ಮುರಿದು ಮೂರ್ತಿ ಕದ್ದು ಪರಾರಿಯಾಗಲು ಯತ್ನಿಸಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net