ದೇವರ ಎತ್ತುಗಳಿಗೆ ಶಾಶ್ವತ ನೆಲೆ ಕಲ್ಪಿಸಿ

CLK DEVARA YETTUGALU 25
Published on

ಚಳ್ಳಕೆರೆ: ತಾಲೂಕಿನ ಬುಕ್ಕಂಬೂದಿ ಭಾಗದ ಬುಡಕಟ್ಟು ಮ್ಯಾಸ ನಾಯಕರು ಪರಶುರಾಂಪುರ ಸಮೀಪದ ಅಟ್ಟುಗ್ಲೋರು ಕಪಿಲೆಯಲ್ಲಿ ಸಾಕುತ್ತಿರುವ 130 ದೇವರ ಎತ್ತುಗಳಿಗೆ ನೆರಳು ಮತ್ತು ಶಾಶ್ವತ ಮೇವಿನ ಅನುಕೂಲ ಸಿಗಬೇಕಿದೆ.

ಇಲ್ಲಿನ ಅಣ್ಣತಮ್ಮಂದಿರ ಪ್ರಮುಖ ಕಸುಬುಗಳಲ್ಲಿ ಗೋಪಾಲನೆ ಪ್ರಧಾನವಾಗಿದೆ. ಹಿರಿಯರ ಆಣತಿಯಂತೆ ಸಾಕಿದ ದೇವರ ಎತ್ತುಗಳನ್ನು ಸಾಕ್ಷಾತ್ ದೇವರಂತೆ ಪೂಜಿಸುತ್ತಾರೆ. ಈ ದೇವರ ಎತ್ತುಗಳನ್ನು ಮಾರಾಟ ಮಾಡುವುದಿಲ್ಲ. ವಯೋಸಹಜ ಸಾವಾದರೂ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ಮಾಡುವ ಪದ್ಧತಿ ಇದೆ. ಬುಕ್ಕಂಬೂದಿ ಕಟ್ಟೆಮನೆಯ ಮೂಲ ನೆಲೆಯಿಂದ ಕರೆತಂದು ಪರಶುರಾಂಪುರ ಭಾಗದಲ್ಲಿ ಸಾಕುತ್ತಿರುವ ದೇವರ ಎತ್ತುಗಳಿಗೆ ಸ್ಥಿರವಾದ ನೆಲೆ ಇಲ್ಲದಾಗಿದೆ. ಈ ವರ್ಷದ ಮಳೆಯ ಕೊರತೆ ಹಿನ್ನೆಲೆಯಲ್ಲಿ ದಿನದ ಮೇವಿಗೂ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಪೂಜಿಸುವಂತಹ ದೇವರ ಎತ್ತುಗಳಿಗೆ ಗೌರವ ಸಿಗಬೇಕು. ಸ್ವಾತಂತ್ರ್ಯವಾಗಿ ದೇವರ ಎತ್ತುಗಳಿಗೆ ಶಾಶ್ವತ ನೆರಳು, ನೀರು ಮತ್ತು ಮೇವಿನ ವ್ಯವಸ್ಥೆ ಆಗಬೇಕು ಎನ್ನುವುದು ಗುಡಿಕಟ್ಟಿನ ಅಣ್ಣತಮ್ಮಂದಿರ ಒತ್ತಾಸೆ.

ಬುಕ್ಕಂಬೂದಿ ಕಟ್ಟೆಮನೆಯ ಸಂಬಂಧವಾಗಿ ಸುಮಾರು 2 ಸಾವಿರ ಕುಟುಂಬಗಳಿವೆ. ಕಟ್ಟೆಮನೆಯಲ್ಲಿ ದೀಪಾವಳಿ, ಹುರುಳಿ ಹಬ್ಬ ಸಂಭ್ರಮದಿಂದ ಆಚರಿಸುತ್ತೇವೆ. ಇಲ್ಲಿನ ದೇವರ ಎತ್ತುಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಗೊಲ್ಲರ ಪೂಜಾರಿಗಳು ಇದಿ-ಪದಿ ಕಟ್ಟುವ ಮೂಲಕ ಹಬ್ಬ ಆರಂಭಿಸಲಾಗುತ್ತದೆ. ಪರಶುರಾಂಪುರದಲ್ಲಿ ಸಾಕುತ್ತಿರುವ ದೇವರ ಎತ್ತುಗಳಿಗೆ ಶಾಶ್ವತವಾಗಿ ಸುಮಾರು 2 ಎಕರೆ ಭೂಮಿ ಮತ್ತು ನೀರು, ಮೇವಿನ ವ್ಯವಸ್ಥೆ ಆಗಬೇಕಿದೆ
ಟಿ. ನಾಗರಾಜ, ಕಟ್ಟೆಮನೆಯ ಮುಖಂಡ, ಪರಶುರಾಂಪುರ.

ಪ್ರಸಕ್ತ ವರ್ಷ ವಾಡಿಕೆ ಮಳೆ ಸಂಪೂರ್ಣ ಕುಂಠಿತವಾಗಿದೆ. ಇದರಿಂದ ಮಳೆ ಆಧಾರಿತ ಶೇಂಗಾ ಬೆಳೆಗೆ ಕೊರತೆ ಆದಂತೆ ಜಾನುವಾರುಗಳಿಗೆ ಮೇವಿನ ಕೊರತೆ ಕಾಡುತ್ತಿದೆ. ಈಗಾಗಲೇ ಸರ್ಕಾರದ ಹಂತದಲ್ಲಿ ಗೋಶಾಲೆಗಳ ಸ್ಥಾಪನೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಜತೆಗೆ ನನ್ನಿವಾಳ, ಪರಶುರಾಂಪುರ ಮತ್ತು ತುರುವನೂರು ಭಾಗದಲ್ಲಿರುವ ಸುಮಾರು 1871 ದೇವರ ಎತ್ತುಗಳ ಪೋಷಣೆಗೆ ವಿಶೇಷ ಆದ್ಯತೆ ಮೇರೆಗೆ ಮೇವು ಮತ್ತು ಶೆಡ್ಡಿನ ವ್ಯವಸ್ಥೆ ಮಾಡಲಾಗುವುದು.
ಟಿ.ರಘುಮೂರ್ತಿ, ಶಾಸಕರು, ಚಳ್ಳಕೆರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net