

ಚಿತ್ರದುರ್ಗ: ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದೇವರ ಎತ್ತುಗಳ ನಿರ್ವಹಣೆಗೆ ಟ್ರಸ್ಟ್ ರಚನೆಗೆ ಪ್ರೋತ್ಸಾಹಿಸುವಂತೆ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿ, ದೇವರ ಎತ್ತುಗಳು ಗೋಶಾಲೆಗಳಲ್ಲಿ ಇರದ ಕಾರಣ, ಬರಗಾಲದ ಸಂದರ್ಭದಲ್ಲಿ ಮೇವು ಹಾಗೂ ಕುಡಿಯುವ ನೀರಿನ ಅನುದಾನ ಒದಗಿಸಲು ಬರುವುದಿಲ್ಲ ಎಂದರು.
ಐವತ್ತಕ್ಕಿಂತಲೂ ಹೆಚ್ಚಿನ ದೇವರ ಎತ್ತುಗಳನ್ನು ಒಳಗೊಂಡಂತೆ ಟ್ರಸ್ಟ್ ರಚಿಸಿ, ನಿರ್ವಹಣೆ ಹೊಣೆ ವಹಿಸಿಕೊಂಡರೆ, ಸರ್ಕಾರದಿಂದ ಪ್ರತಿ ಗೋವಿಗೂ ವಾರ್ಷಿಕ ನಿರ್ವಹಣೆ ವೆಚ್ಚವಾಗಿ 11 ಸಾವಿರ ರೂ. ಅನುದಾನ ಲಭಿಸಲಿದೆ. ತಹಸೀಲ್ದಾರ್‌ಗಳಿಗೆ ಈ ಕುರಿತು ಸೂಚಿಸುವುದಾಗಿ ಹೇಳಿದರು.
*ಅಕ್ರಮ ಪ್ರಾಣಿ ವಧೆಗೆ ಕಡಿವಾಣ ಹಾಕಿ: ಹಬ್ಬದ ಆಚರಣೆ ಸಂದರ್ಭದಲ್ಲಿ ಒಂಟೆ ಹಾಗೂ ಗೋವುಗಳನ್ನು ವಧೆ ಮಾಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ದೂರು ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ನಗರ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳಿಗೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಎಡಿಸಿ ಸೂಚಿಸಿದರು.
13 ವರ್ಷ ದಾಟಿದ ಪ್ರಮಾಣೀಕರಿಸಿದ ಎಮ್ಮೆ, ಕೋಣಗಳನ್ನು ವಧಿಸಬಹುದಾಗಿದೆ. ಗೋವು ಹಾಗೂ ಒಂಟೆ ವಧೆ ನಿಷೇಧಿಸಲಾಗಿದೆ. ಕುರಿ, ಮೇಕೆಗಳ ವಧೆಗೆ ನಿರ್ಬಂಧವಿಲ್ಲ ಎಂದು ಪಶುವೈದ್ಯಕೀಯ ಹಾಗೂ ಸೇವಾ ಇಲಾಖೆ ಉಪನಿರ್ದೇಶಕಿ ಡಾ.ಇಂದಿರಾ ಬಾಯಿ ಹೇಳಿದರು.
ಎಸ್‌ಪಿ, ಎಡಿಸಿ, ಡಿಸಿಎಫ್, ನಗರಸಭೆ ಪೌರಾಯುಕ್ತೆ, ಡಿಡಿಪಿಐ, ಆರ್‌ಟಿಒ, ಪಶುವೈದ್ಯಕೀಯ ನಿರ್ದೇಶಕರು ಇರುವ ಡಿಸಿ ಟಿ.ವೆಂಕಟೇಶ್ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಪ್ರಾಣಿ ದಯಾ ಸಂಘದ ನವೀಕರಣಕ್ಕೆ ಸಭೆ ಅನುಮತಿ ನೀಡಿತು.
ಬೀಡಾಡಿ ದನಗಳಿಗೆ ಪ್ಲಾಸ್ಟಿಕ್ ಮಾರಕವಾಗುತ್ತಿದ್ದು, ಈ ಕುರಿತ ವರದಿಯನ್ನು ಪ್ರಾಣಿ ದಯಾ ಸಂಘಕ್ಕೆ ನೀಡುವಂತೆ ಎಡಿಸಿ ತಿಳಿಸಿದರು.
ಜಿಲ್ಲೆಯ ವಿವಿಧ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲು ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದರು.
ಸರ್ಕಾರಿ ಗೋಶಾಲೆಯ ಸಗಣಿ ವಿಲೇವಾರಿ, ಹೆಚ್ಚುವರಿ ಗೋಶಾಲೆಗಳ ನಿರ್ಮಾಣ, ಡಿ ದರ್ಜೆ ನೌಕರರ ನೇಮಕ, ಜಿಲ್ಲಾ ಜಾನುವಾರು ಮಾರುಕಟ್ಟೆ ಮೇಲ್ವಿಚಾರಣೆ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಡಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಂಜಾರ ಪೋಲ್ ಹಾಗೂ ಇತರ ಗೋಶಾಲೆಗಳಿಗೆ ಬೆಂಬಲ ಕಾರ್ಯಕ್ರಮಗಳ ಪ್ರಸ್ತಾವನೆಗಳ ಕುರಿತಂತೆ ನಿರ್ಣಯಗಳನ್ನು ಸಭೆ ಅಂಗೀಕರಿಸಿತು.
ನಗರಸಭೆ ಆಯುಕ್ತೆ ಎಂ.ರೇಣುಕಾ, ಆರ್‌ಟಿಒ ಭರತ್ ಎಂ.ಕಾಳಿಸಿಂಗೆ, ಪಶುವೈದ್ಯಕೀಯ ಇಲಾಖೆ ಪಾಲಿ ಕ್ಲಿನಿಕ್ ಉಪನಿರ್ದೇಶಕ ಎನ್.ಕುಮಾರ್, ಜಿಲ್ಲಾ ಪ್ರಾಣಿ ಕಲ್ಯಾಣಾಧಿಕಾರಿ ದೇವಿಪ್ರಸಾದ್ ಮತ್ತಿತರರು ಇದ್ದರು.