

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ದೇವರ ಹೆಸರಿನಲ್ಲಿ ಮಾಡುವ ಉತ್ಸವಗಳು ಸಮುದಾಯಗಳ ನಡುವೆ ಸ್ನೇಹ-ಬಾಂಧವ್ಯಗಳ ವೃದ್ಧಿಗೆ ಸಹಕಾರಿ ಎಂದು ನಗರಸಭೆ ಸದಸ್ಯೆ ರಾಜಮ್ಮ ಪಿಳ್ಳಪ್ಪ ಅಭಿಪ್ರಾಯಪಟ್ಟರು.
ನಗರದ ಪರವಣ್ಣ ಬಡಾವಣೆಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ಸೋಮವಾರ ರಾತ್ರಿ ಬಯಲು ವಿಶ್ವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ಪ್ರಯುಕ್ತ ಹೂವಾಡಿಗ ಬಲಿಜ ಸಮುದಾಯ ಆಯೋಜಿಸಿದ್ದ ವಿಶ್ವೇಶ್ವರನ ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಮಾತನಾಡಿದರು.
ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ದೇವರು, ಜಾತ್ರೆ, ಉತ್ಸವಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ಧರ್ಮ, ಸಂಸ್ಕೃತಿಯ ಸಂಕೇತವಾಗಿರುವ ದೇವರ ಉತ್ಸವಗಳು ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಿವೆ. ಅದರಲ್ಲೂ ನಗರದಲ್ಲಿ ಹಬ್ಬದವಾತಾವರಣ ಸೃಷ್ಟಿಸುವ ವಿಶ್ವೇಶ್ವರ ಸ್ವಾಮಿಯ ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವ ತಾಲೂಕಿಗೆ ವಿಶೇಷತೆ ತಂದುಕೊಟ್ಟಿವೆ ಎಂದರು. ಟಿಎಪಿಸಿಎಂಎಸ್ ನಿರ್ದೇಶಕ ಎ.ಪಿಳ್ಳಪ್ಪ ಮಾತನಾಡಿ, ಬಯಲು ವಿಘ್ನೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಕೊನೆಯಲ್ಲಿ ವಿವಿಧ ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಿದ ವಿಶ್ವೇಶ್ವರ ಸ್ವಾಮಿಯನ್ನು ತೆರೆದ ವಾಹನದಲ್ಲಿರಿಸಿ ಕಣ್ಮನ ಸೆಳೆಯುವ ಉತ್ಸವ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿಯೂ ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ ಎಂದರು. ನಗರಸಭೆ ಮುಖಂಡರಾದ ಪಾರ್ಥಸಾರಥಿ, ಲೋಕೇಶ್, ಲಕ್ಷ್ಮೀನಾರಾಯಣ್, ಮಂಜುನಾಥ್, ರಾಘವೇಂದ್ರ, ಗಣೇಶ್, ಸತ್ಯನಾರಾಯಣ, ಅಮೃತ್‌ಪಿಳ್ಳಪ್ಪ, ಹರೀಶ್, ದೀಲೀಪ್ ಕುಮಾರ್, ಸಂತೋಷ್, ನಾರಾಯಣ್ ಮೂರ್ತಿ, ರಂಗಪ್ಪ, ಶೋಭರಾಣಿ, ಗಾಯತ್ರಮ್ಮ, ಲಕ್ಷ್ಮೀ ಉಪಸ್ಥಿತರಿದ್ದರು.