

ಆನೇಕಲ್: ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿ ಜೀವನ ನಡೆಸಬೇಕಾದರೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕು ಎಂದು ದಾವಣಗೆರೆ ಎರೆಹೊಸಹಳ್ಳಿ ರೆಡ್ಡಿ ಗುರುಪೀಠದ ಶ್ರೀ ವಿಮಲಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಚನಾಯಕನಹಳ್ಳಿ ಪೊಲೀಸ್ ಬಡಾವಣೆಯಲ್ಲಿ ಸೋಮವಾರ ವೈದ್ಯನಾಥೇಶ್ವರಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದರು.
ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿದರೆ ಕೇಡಾಗುವುದಿಲ್ಲ. ಇನ್ನೊಬ್ಬರನ್ನು ನೋಡಿ ಅಸೂಯೆ ಪಡಬಾರದು. ನಾವೆಲ್ಲರೂ ದೇವರ ಮಕ್ಕಳಾಗಿದ್ದು, ಒಳ್ಳೆಯ ಮನಸ್ಸಿನಿಂದ ಬದುಕಬೇಕು ಎಂದರು.
ಶ್ರೀಮದ್ ರಾಜಪುರ ವೀರ ಧರ್ಮ ಸಿಂಹಾಸನ ಸಂಸ್ಥಾನದ ಡಾ. ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೊಲೀಸ್ ಬಡಾವಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ನಿವೃತ್ತರು, ಹಿರಿಯರ ಮಾರ್ಗದರ್ಶನದಲ್ಲಿ ದೇವಾಲಯ ನಿರ್ಮಿಸಿದ್ದ್ದು, ವೈದ್ಯನಾಥೇಶ್ವರ ಎಲ್ಲರಿಗೂ ಒಳಿತು ಮಾಡಲಿ. ಕರೊನಾ ಮಹಾಮಾರಿ ದೂರವಾಗಲಿ ಎಂದು ಹಾರೈಸಿದರು.
ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ದೇವರ ಮಕ್ಕಳು. ನಮ್ಮ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ದೇವರನ್ನು ಭಕ್ತಿಯಿಂದ ಪೂಜಿಸಿದರೆ ಸಕಲವನ್ನೂ ಕರುಣಿಸುತ್ತಾನೆ ಎಂದರು.
ದೇವರ ಪ್ರತಿಷ್ಠಾಪನೆ ನಿಮಿತ್ತ ೆ.12ರಿಂದ 14ರವರೆಗೂ ದೇವರ ಪ್ರಾರ್ಥನೆ, ಪುಣ್ಯಾಹವಾಚನ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯವತಿ ತೀರ್ಥಪ್ರಸಾದ ವಿನಿಯೋಗ, ಪುಣ್ಯಾಹವಾಚನ, ಗಣಪತಿ ಅಥರ್ವಶೀರ್ಷ ಯಾಗ, ಚಂಡಿಕಾ ಯಾಗ, ಮಹಾರುದ್ರ ಹೋಮ, ರುದ್ರ ಮಂಡಲಪೂಜೆ, ಸುಬ್ರಹ್ಮಣ್ಯ ಹೋಮ ಸೇರಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಸೋಮವಾರ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ವೀರಾಂಜನೇಯ ದೇವಾಲಯದಿಂದ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು. ಅನ್ನ ಸಂತರ್ಪಣೆ ನಡೆಯಿತು.
ಗುಮ್ಮಳಾಪುರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಚನ್ನಪಟ್ಟಣ ಬೇವೂರು ಮಲ್ಲಿಕಾರ್ಜುನ ಸ್ವಾಮಿ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ಕಾಚನಾಯಕನಹಳ್ಳಿ ತಾತಯ್ಯನವರ ಮಠದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಇತರರು ಇದ್ದರು.