

ಚನ್ನರಾಯಪಟ್ಟಣ: ದೇವರ ಅನುಗ್ರಹವಿಲ್ಲದೇ ಈ ಭೂಮಿಯ ಮೇಲೆ ಒಂದು ಹುಲ್ಲು ಕಡ್ಡಿಯೂ ಸಹ ಅಲುಗಾಡಲು ಸಾಧ್ಯವಿಲ್ಲ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿಯ 91 ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ರಾತ್ರಿ ಏರ್ಪಡಿಸಿದ್ದ 97 ನೇ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಿರ್ವಚನ ನೀಡಿದರು.
ನಿಸರ್ಗದ ಹಿಂದೆ ನಿಂತು ಜಗತ್ತನ್ನು ಮುನ್ನಡೆಸುವ ಅದ್ಭುತವಾದ ಮಹಾನ್ ಶಕ್ತಿಯೊಂದಿದೆ ಎನ್ನುವುದು ಅಕ್ಷರಸಃ ಸತ್ಯವಾಗಿದ್ದು ಭೂಮಿಯ ಸೃಷ್ಠಿಕರ್ತ ದೇವರ ಪರಿಕಲ್ಪನೆಯಲ್ಲಿ ಸೃಷ್ಠಿಯಾಗಿರುವ ಭೂಮಂಡಲದಲ್ಲಿ ನಡೆಯುವ ವಿಶ್ಮಯಗಳು ಅಪಾರ ಎಂದರು.
ಹುಟ್ಟಿದ ದಿನದಿಂದಲೇ ಸಾವಿನ ಕಡೆಗೆ ಪಯಣ ಸಾಗಲಿದ್ದು ಸಾವು ಎಂಬುದು ನಮ್ಮ ನೆರಳಿನಂತೆಯೇ ಹಿಂಬಾಲಿಸಲಿದೆ. ನಡುವೆ ಇದಷ್ಟು ದಿನಗಳು ಕಾಲದ ನಂತರವೂ ಹೆಸರು ಉಳಿಯುವಂತ ಸಾಧನೆಯ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.
ಇಲ್ಲಿ ಯಾರೂ ಶಾಶ್ವತವಾಗಿ ಉಳಿಯುವುದಿಲ್ಲ. ಪ್ರಕೃತಿಯ ಮಡಿಲಲ್ಲಿ ಉಸಿರನ್ನು ಸಾಲವಾಗಿ ಪಡೆದು ಬಂದಿರುವ ನಾವು ಹಿಂದಿರುಗುವಾಗ ಅದರ ಸಾಲವನ್ನು ಮರುಪಾವತಿಸಿಯೇ ಪಯಣಿಸಿಬೇಕು. ಆದರೆ ಇದ್ದು ಹೋಗುವ ನಡುವಿನ ದಿನಗಳಲ್ಲಿ ನಮ್ಮ ಬದುಕಿನ ಶೈಲಿ, ಆಚರಣೆ ಹಾಗೂ ಅಳವಡಿಸಿಕೊಳ್ಳುವ ಮೌಲ್ಯಯುತ ಜೀವನ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಇರಬೇಕು ಎಂದು ಸಲಹೆ ನೀಡಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ನಾವು ಎಷ್ಟೆಲ್ಲ ದುಡಿದಿದ್ದೇವೆ ಏನೆಲ್ಲಾ ಸಂಪಾದಿಸಿದ್ದೇವೆ ಎಂದು ಏಣಿಸುವ ಬದಲು ದುಡಿದ ಹಣವನ್ನು ಯಾವ ಧರ್ಮ ಕಾರ್ಯಕ್ಕೆ ಎಷ್ಟು ಉಪಯೋಗಿಸಿದ್ದೇನೆ ಎಂಬುದು ಮುಖ್ಯವಾಗಿರುತ್ತದೆ. ಕೂಡಿಟ್ಟು ಸ್ವಾರ್ಥದ ಬದುಕು ನಡೆಸುವುದಕ್ಕಿಂತ ಧರ್ಮ ಕಾರ್ಯಗಳಿಗೆ ನಿಸ್ವಾರ್ಥದಿಂದ ಬಳಸುವುದು ಸೂಕ್ತ ಎಂದರು.
ಶ್ರೀ ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ, ದಸರಿಘಟ್ಟ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಚಿತ್ರದುರ್ಗ ಮಠದ ಶ್ರೀ ಶಿವಲಿಂಗನಾಥಸ್ವಾಮೀಜಿ, ಶೃಂಗೇರಿ ಮಠದ ಶ್ರೀ ಗುಣನಾಥಸ್ವಾಮೀಜಿ, ಚಿಕ್ಕಬಳ್ಳಾಪುರ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಬಾಗಲಕೋಟೆ ಮಠದ ಶ್ರೀ ಕೈಲಾಸನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿಯ ಶ್ರೀ ಶಿವಪುತ್ರನಾಥಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷ ಶಿವನಂಜೇಗೌಡ, ಸದಸ್ಯರಾದ ಟಿ.ಮಂಜೇಗೌಡ, ರತ್ನ ಕುಮಾರಸ್ವಾಮಿ ಹಾಗೂ ಇತರರು ಇದ್ದರು.