

ಹುಬ್ಬಳ್ಳಿ: ಜುಲೈ 28ರಿಂದ ಜರ್ಮನಿಯಲ್ಲಿ ನಡೆಯಲಿರುವ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ಅಂತಾರಾಷ್ಟ್ರೀಯ ಕುಬ್ಜ ಕ್ರೀಡಾಪಟು ದೇವಪ್ಪಾ ಮೋರೆ ಅವರಿಗೆ ಇಲ್ಲಿನ ಕರ್ನಾಟಕ ಜಿಮಖಾನಾ ಅಸೋಸಿಯೇಶನ್ (ಕೆಜಿಎ) ಹಾಗೂ ಕರ್ನಾಟಕ ಜಿಮಖಾನಾ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (ಕೆಜಿಪಿಎಲ್)ನ ಆಟಗಾರರು 50 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಮೋರೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋರೆಗೆ ಕೆಜಿಎ ಪದಾಧಿಕಾರಿಗಳು ಹಾಗೂ ಕೆಜಿಪಿಎಲ್ ಕ್ರೀಡಾಪಟುಗಳು ಆರ್ಥಿಕ ನೆರವು ನೀಡಿದರಲ್ಲದೇ ಸನ್ಮಾನಿಸಿ ಶುಭ ಹಾರೈಸಿದರು.
ಸಂಕಲ್ಪ ಶೆಟ್ಟರ್ ಸನ್ಮಾನಿಸಿದರು. ಕೆಜಿಎ ಕಾರ್ಯದರ್ಶಿ ವೀರಣ್ಣ ಸವಡಿ, ಕೆಜಿಪಿಎಲ್ ಸಂಯೋಜಕ ಉದಯ ಬಾಡಕರ, ಕೃಷ್ಣಾ ಉಚ್ಚಿಲ, ಶೀತಲ ಗೊಟಡಕಿ, ಬಸವರಾಜ ಉಳ್ಳಾಗಡ್ಡಿಮಠ, ವಿಶ್ವನಾಥ ಉಪ್ಪಿನ ಇದ್ದರು.
ದೇವಪ್ಪಾ ಮೋರೆಗೆ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ 10 ಸಾವಿರ ರೂ. ನಗದು ನೆರವು ನೀಡಿದ್ದಾರೆ.