ದೇವನಹಳ್ಳಿ ಚಲೋಗೆ 500 ರೈತರು ಭಾಗಿ

honnur prakash
Published on

ಚಾಮರಾಜನಗರ: ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಜೂ.25 ರಂದು ನಡೆಯುವ ದೇವನಹಳ್ಳಿ ಚಲೋಗೆ ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಹೊನ್ನೂರು ಪ್ರಕಾಶ್ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣ ಸುತ್ತಮುತ್ತಲಿನ ಫಲವತ್ತಾದ ಸುಮಾರು 1177 ಎಕರೆ ರೈತರ ಜಮೀನನ್ನು ಮೂರು ವರ್ಷದ ಹಿಂದೆ ವಶಪಡಿಸಿಕೊಳ್ಳಲು ಅಂದಿನ ರಾಜ್ಯ ಸರ್ಕಾರ ಆದೇಶಿಸಿದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ವಚನ ಭ್ರಷ್ಟರಾಗಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಒಂದು ಮಾತು, ಅಧಿಕಾರಕ್ಕೆ ಬಂದಾಗ ಮತ್ತೊಂದು ಮಾತನ್ನಾಡುತ್ತಿದ್ದಾರೆ. ರೈತರಿಗೆ ನೋಟಿಸ್ ನೀಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಒಂದೆರಡು ಎಕರೆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬದುಕುತ್ತಿರುವ ರೈತರು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಕೃಷಿ ಕ್ಷೇತ್ರವು ಜಾಸ್ತಿ ಉದ್ಯೋಗ ಕೊಡುವ ತೆಗೆ ಎಲ್ಲರಿಗೂ ಅನ್ನ ಹಾಕುತ್ತದೆ. ಕೂಡಲೇ ಸರ್ಕಾರ ಭೂಮಿ ವಶಪಡಿಸಿಕೊಳ್ಳುವುದನ್ನು ಕೈ ಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಗೋಷ್ಠಿಯಲ್ಲಿ ಪ್ರಭುಸ್ವಾಮಿ, ಮಾಡ್ರಳ್ಳಿ ಪಾಪಣ್ಣ, ಚೆನ್ನಮಲ್ಲಪ್ಪ, ವಡ್ಡರಹಳ್ಳಿ ಪ್ರಸಾದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net