

ಬಾಳೆಹೊನ್ನೂರು: ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿ ದೇವದಾನ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಜಿ.ಸಂಪತ್ ಆಯ್ಕೆಯಾದರು.
ಗ್ರಾಪಂ ಅಧ್ಯಕ್ಷರಾಗಿದ್ದ ಶೇಷಪ್ಪ ಗೌಡ ಪಕ್ಷದ ಒಳ ಒಪ್ಪಂದದಂತೆ ಬೇರೊಬ್ಬ ಸದಸ್ಯರಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಕೆ.ಜಿ.ಸಂಪತ್ ಹಾಗೂ ಬಿಜೆಪಿ ಬೆಂಬಲಿತ ಮತ್ತೊಬ್ಬ ಸದಸ್ಯ ಮದನ್ ಹುಣಸೇಹಳ್ಳಿ ನಾಮಪತ್ರ ಸಲ್ಲಿಸಿದ್ದರು. ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ 10 ಹಾಗೂ ಕಾಂಗ್ರೆಸ್ ಬೆಂಬಲಿತ 7 ಸದಸ್ಯರಿದ್ದು, ಕೆ.ಜಿ.ಸಂಪತ್ 11 ಹಾಗೂ ಮದನ್ 6 ಮತಗಳನ್ನು ಪಡೆದರು. ಇಬ್ಬರಿಗೂ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಬೇರೆ ಬೇರೆ ಸದಸ್ಯರು ಮತಗಳನ್ನು ನೀಡಿ ಬೆಂಬಲಿಸಿದರು. ಚುನಾವಣಾಧಿಕಾರಿಯಾಗಿ ವಿಜಯ್‌ಕುಮಾರ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಸಂಪತ್ ಅವರನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ನೂತನ ಅಧ್ಯಕ್ಷ ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದಲೇ ಆಯ್ಕೆಯಾಗಿದ್ದು, ಸಂಪತ್ ನಮ್ಮ ಪಕ್ಷದ ಬೆಂಬಲಿತ ಸದಸ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹಾಕಿಕೊಂಡಿದ್ದಾರೆ.
ಪಕ್ಷಾಂತರ ಮಾಡಿಲ್ಲ: ಗ್ರಾಪಂ ಸದಸ್ಯ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದೆ. ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಬಿಜೆಪಿ ಅವಕಾಶ ನೀಡಿದೆ. ನಾನು ಬಿಜೆಪಿ ಕಾರ್ಯಕರ್ತನೇ ಆಗಿದ್ದೇನೆ. ಬಿಜೆಪಿಯೇ ನನ್ನ ಮಾತೃಪಕ್ಷ ಎಂದು ದೇವದಾನ ಗ್ರಾಪಂ ಅಧ್ಯಕ್ಷ ಕೆ.ಜಿ.ಸಂಪತ್ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲ ಪಡೆದಿದ್ದೇನೆಯೇ ಹೊರತು ಪಕ್ಷಾಂತರ ಮಾಡಿಲ್ಲ ಎಂದು ತಿಳಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಶೇಷಪ್ಪ ಗೌಡ, ಉಪಾಧ್ಯಕ್ಷೆ ಶೀಲಾವತಿ ಇತರರಿದ್ದರು.