ದೇವಗಂಗೆಯನ್ನು ಧರೆಗಿಳಿಸಿದ ಛಲ ಬಿಡದ ತ್ರಿವಿಕ್ರಮ

4-KGLPHOTO-3,,,,,
Published on

ಹನೂರು: ಭಗೀರಥ ಮಹರ್ಷಿಗಳು ಅವಿರತ ಪ್ರಯತ್ನದ ಶ್ರಮದಿಂದ ದೇವಗಂಗೆಯನ್ನು ಧರೆಗಿಳಿಸಿದ ಛಲ ಬಿಡದ ತ್ರಿವಿಕ್ರಮ ಎಂದು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಅತಿಥಿಗೃಹದ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿ ಮಾತನಾಡಿದರು. ವಸಂತ ಋತುವಿನ ವೈಶಾಖ ಮಾಸದ ಸಪ್ತಮಿಯಂದು ದೇವಗಂಗೆ ಧರೆಗೆ ಬಂದ ದಿನವನ್ನು ಪ್ರತಿ ವರ್ಷ ಗಂಗಾ ಸಪ್ತಮಿ ಎಂದು ಕರೆಯುತ್ತೇವೆ. ಈ ದಿನದಂದೇ ಭಗೀರಥ ಜಯಂತಿಯನ್ನು ಆಚರಿಸಲಾಗುತ್ತದೆ. ಭಗೀರಥ ಮಹರ್ಷಿಗಳು ಮಹಾರಾಜರಾಗಿದ್ದು, ಸಕಲ ವೈಭವಗಳಿದ್ದರೂ ದೇವಗಂಗೆಯನ್ನು ಪಡೆಯಬೇಕು ಎನ್ನುವ ತಂದೆ ಹಾಗೂ ತಾತಂದಿರ ಆಸೆಯನ್ನು ಈಡೇರಿಸಲಾಗಲಿಲ್ಲ. ಇದರಿಂದ ಪ್ರತಿಜ್ಞೆ ಮಾಡಿದ ಮಹರ್ಷಿಗಳು ಘೋರ ತಪಸ್ಸು ಮಾಡಿ ಸ್ವರ್ಗದಿಂದ ದೇವಗಂಗೆಯನ್ನು ಧರೆಗಿಳಿಸುವುದರ ಮೂಲ ಪಿತೃಗಳಿಗೆ ಸ್ವರ್ಗ ದೊರಕಿಸಿಕೊಟ್ಟರು. ಹಾಗಾಗಿ ಇವರ ಸಾಧನೆ ಅಸಾಮಾನ್ಯ. ಇವರ ಆದರ್ಶ ಸಾಧಕರಿಗೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.

ಸಮುದಾಯ ಭವನ ನಿರ್ಮಾಣಕ್ಕೆ ಮನವಿ:

ಸಮುದಾಯದ ಮುಖಂಡ ಹೊಸದೊಡ್ಡಿಯ ನಿಂಗಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಸಮುದಾಯದ ಜನಸಂಖ್ಯೆ ಸುಮಾರು 15 ಸಾವಿರಕ್ಕೂ ಹೆಚ್ಚಿದೆ. ಆದರೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಆದ್ದರಿಂದ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮುದಾಯದ ಅಭಿವೃದಿಯತ್ತ ಗಮನಹರಿಸಬೇಕು. ಇನ್ನು ಸಮುದಾಯ ಸಂಘಟನೆಯಾಗಲು ಹಾಗೂ ಸಭೆ, ಕಾರ್ಯಕ್ರಮಗಳನ್ನು ಆಯೋಜಿಸಲು ಸಮುದಾಯದ ಭವನದ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರದಿಂದ ಸಮುದಾಯ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ತಹಸೀಲ್ದಾರ್ ಪ್ರತಿಕ್ರಿಯಿಸಿ, ಸರ್ಕಾರಿ ಜಾಗ ಗುರ್ತಿಸಿ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಸದಸ್ಯ ಮಹೇಶ್‌ನಾಯ್ಕ, ಆರ್‌ಐ ಶೇಷಣ್ಣ, ನೌಕರ ಸಿದ್ದರಾಜು, ಪ್ರಭಾರ ಅಗ್ನಿಶಾಮಕ ಅಧಿಕಾರಿ ಮಹೇಶ್, ಮುಖಂಡರಾದ ರಾಜಣ್ಣ, ಕಾಮಶೆಟ್ಟಿ, ಅಂಕಶೆಟ್ಟಿ, ಬಸವರಾಜು, ಮಾದೇವ, ನಾಗಣ್ಣ, ಹನುಮಶೆಟ್ಟಿ, ಜಯರಾಜ್ ಹಾಗೂ ಇನ್ನಿತರರು ಇದ್ದರು.

ಪಟ್ಟಣ ಪಂಚಾಯಿತಿಯಲ್ಲಿ ಆಚರಣೆ:

ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನೌಕರರು ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಭಾನುವಾರ ಜಯಂತಿಯನ್ನು ಆಚರಿಸಲಾಯಿತು. ಪಪಂ ಅಧ್ಯಕ್ಷೆ ಮಮ್ತಾಜ್‌ಬಾನು, ಸದಸ್ಯರಾದ ಸೋಮಶೇಖರ್, ಹರೀಶ್, ಸುದೇಶ್, ಮಹೇಶ್‌ನಾಯ್ಕ, ಬಸವರಾಜು, ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಹಾಗೂ ಕಚೇರಿ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net