

ರಾಜಕುಮಾರ ಹೊನ್ನಾಡೆ ಹುಲಸೂರು: ಸರ್ಕಾರ ಅನ್ನದಾತರ ಕೃಷಿ ಚಟುವಟಿಕೆಗಾಗಿ ಯಾವುದೇ ತೊಂದರೆ ಆಗಬಾರದು ಹಾಗೂ ಅವರ ಜಮೀನುಗಳಿಗೆ ತೆರಳಲು ವ್ಯವಸ್ಥಿತವಾದ ರಸ್ತೆ ಇರಬೇಕು ಎಂಬ ಉದ್ದೇಶದಿಂದ ನಮ್ಮ ಹೊಲ ನಮ್ಮ ದಾರಿ ಯೋಜನೆ ಅಡಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಆದರೆ ಅದು ಪಟ್ಟಣದ ರೈತರಿಗೆ ಉಪಯುಕ್ತ ಇಲ್ಲದಂತೆ ಗೋಚರಿಸುತ್ತಿದೆ.
ಹೌದು. ಪಟ್ಟಣದ ಭೀಮನಗರ ಬಡಾವಣೆಯಿಂದ ಕೇಸರ ಜವಳಗಾ ಗ್ರಾಮಕ್ಕೆ ತೆರಳುವ ಹಳೆಯ ರಸ್ತೆ ಹದಗೆಟ್ಟಿದ್ದು, ಕೆಲವೆಡೆ ರಸ್ತೆ ಉದ್ದಕ್ಕೂ ಎರಡು ಅಡಿಗೂ ಹೆಚ್ಚು ಆಳದ ಗುಂಡಿಗಳು ಬಿದ್ದರೆ, ಹಲವೆಡೆ ಸ್ವಲ್ಪ ಮಳೆಯಾದರೂ ಕೆಸರುಗದ್ದೆಯಾಗಿ ಮಾರ್ಪಟ್ಟು ನಡೆದಾಡಲು ಸಹ ಬರದಂತಹ ಪರಿಸ್ಥಿತಿ ಉಂಟಾಗಿದೆ.
ರಸ್ತೆ ರಿಪೇರಿ ಮಾಡಲು ಒತ್ತಾಯಿಸಿ ಹಲವಾರು ಬಾರಿ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದ್ದರಿಂದ ಬೇಸತ್ತು ಈ ಮಾರ್ಗವಾಗಿ ಹಾದುಹೋಗುವ ರೈತರೆಲ್ಲರೂ ಒಂದೆಡೆ ಸೇರಿ ಪ್ರತಿಯೊಬ್ಬರಿಂದ ೫೦೦೦-೧೦೦೦೦ ರೂ. ದೇಣಿಗೆ ಸಂಗ್ರಹಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಚಾಟಿ ಬೀಸಲು ಮುಂದಾಗಿದ್ದಾರೆ.
ಜಿಲ್ಲೆಯ ಬಹುತೇಕ ಗ್ರಾಮಗಳ ರೈತರ ಹೊಲಗಳಿಗೆ ತೆರಳಲು ವ್ಯವಸ್ಥಿತವಾದ ರಸ್ತೆ ಮಾಡಲಾಗಿದೆ. ಪಟ್ಟಣದಿಂದ ಕೇಸರ ಜವಳಗಾಕ್ಕೆ ಹೋಗುವ ಮುಖ್ಯ ರಸ್ತೆ ಇದಾಗಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಧೋರಣೆಯಿಂದ ಮನನೊಂದು ರೈತರೇ ಚಂದಾ ಸಂಗ್ರಹಿಸಿ ರಿಪೇರಿಗೆ ಸೈ ಎಂದಿದ್ದಾರೆ.
ಎಚ್ಚೆತ್ತುಕೊಳ್ಳಲಿ ಜಿಲ್ಲಾಡಳಿತ: ಹಲವು ವರ್ಷಗಳಿಂದ ಈ ರಸ್ತೆ ರಿಪೇರಿ ಮಾಡದ ಕಾರಣ ಬದಿಯಲ್ಲಿ ಜಾಲಿ ಮರಗಳು ಬೆಳೆದಿವೆ. ಗುಂಡಿಗಳು ಸಹ ಬಿದ್ದಿರುವುದರಿಂದ ಅನೇಕ ಅವಘಡಗಳು ಸಂಭವಿಸುವೆ. ಹೊಲದಲ್ಲಿನ ಧಾನ್ಯವನ್ನು ಮನೆಗೆ ತರಲು ಆಗದಂಥ ಪರಿಸ್ಥಿತಿ ಉಂಟಾಗಿದೆ. ಮುಗ್ಧ ರೈತರು ರೊಚ್ಚಿಗೇಳುವ ಮುನ್ನ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ನಮ್ಮ ಜಮೀನುಗಳಿಗೆ ರಸ್ತೆ ಸರಿಯಿಲ್ಲದೆ ಕೂಲಿ ಕಾರ್ಮಿಕರು ಕೆಲಸ ಮಾಡಲು ಬರುತ್ತಿಲ್ಲ. ಹೊಲದಲ್ಲಿ ಬೆಳೆದ ದವಸ-ಧಾನ್ಯ ಮನೆಗೆ ತರಲು ಬಾರದಂತೆ ರಸ್ತೆ ಕೆಟ್ಟಿದೆ. ಜನಪ್ರತಿನಿಧಿಗಳ ಹತ್ತಿರ ಸಾಕಷ್ಟು ಬಾರಿ ಹೋಗಿ ಮನವಿ ಮಾಡಿದರೂ ಕ್ಯಾರೆ ಎಂದಿಲ್ಲ.
| ಚಂದ್ರಕಾಂತ ಮೋರೆ ಹುಲಸೂರು ರೈತ
ಹುಲಸೂರು ಪಟ್ಟಣದಿಂದ ಕೇಸರ ಜವಳಗಾ ಹಳೆಯ ರಸ್ತೆಯಿಂದ ಹಾದು ಹೋಗುವ ರೈತರು ದೇಣಿಗೆ ಸಂಗ್ರಹಿಸಿ ರಸ್ತೆ ನಿರ್ಮಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿಲ್ಲ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರಸ್ತೆ ನಿರ್ಮಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
| ಮಹಾದೇವ ಜಮ್ಮುಹುಲಸೂರು ತಾಪಂ ಇಒ