

ಹುಬ್ಬಳ್ಳಿ: ಪ್ರಸಕ್ತ ವರ್ಷ ಕರೊನಾ ಕಾರಣದಿಂದ ಶಬರಿಮಲೈ ಅಯ್ಯಪ್ಪಸ್ವಾಮಿ ದರ್ಶನ ಯಾತ್ರಿಕರಿಗೆ ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಶಿರೂರ ಪಾರ್ಕ್ ತದ್ರೂಪಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಮಾಲಾಧಾರಿಗಳು ಬರುವ ಸಾಧ್ಯತೆ ಇದೆ. ಮಾಲಾಧಾರಿಗಳು ಹಾಗೂ ದರ್ಶನಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಿರೂರ ಪಾರ್ಕ್ ಅಯ್ಯಪ್ಪಸ್ವಾಮಿ ದೇವಸ್ಥಾನದ ಧರ್ಮದರ್ಶಿ ಆನಂದ ಗುರುಸ್ವಾಮಿ ಹೇಳಿದರು.
ಇಲ್ಲಿನ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಕರೆಯಲಾಗಿದ್ದ ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ನ 2019-20ನೇ ಸಾಲಿನ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಈ ಅಯ್ಯಪ್ಪಸ್ವಾಮಿ ದೇಗುಲದ ಸ್ಥಾಪನೆಯ ಹಿನ್ನೆಲೆ ಹಾಗೂ ಕೈಗೊಂಡ ಸುಧಾರಣೆ ಕ್ರಮಗಳನ್ನು ಪ್ರಾಸ್ತಾವಿಕವಾಗಿ ವಿವರಿಸಿದ ಅವರು, ಅಯ್ಯಪ್ಪ ಗುಡಿ ಅಭಿವೃದ್ಧಿಗೆ ಡಾ. ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಅವರ ಕೊಡುಗೆ, ದಾನ, ಧರ್ಮವನ್ನು ಸ್ಮರಿಸಿದರು.
ಭಕ್ತ ವೃಂದ ಟ್ರಸ್ಟ್ ಹಾಗೂ ಸೇವಾ ಸಮಿತಿಯ ಸದಸ್ಯರ ಸಹಕಾರಕ್ಕೆ ಆನಂದ ಗುರುಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಅಧ್ಯಕ್ಷ ಆನಂದ ಸಂಕೇಶ್ವರ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಈ ಸಾಲಿನ ಮಾಲಾಧಾರಿಗಳಿಗೆ ಹಾಗೂ ಭಕ್ತರಿಗೆ ಎಲ್ಲ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು. ಮುಂದೂಡಲ್ಪಟ್ಟಿದ್ದ ದೇಗುಲದ ವಾರ್ಷಿಕೋತ್ಸವವನ್ನು ಅಕ್ಟೋಬರ್ 17ರಂದು ಆಚರಿಸಲಾಗುವುದು. ಈ ದಿಸೆಯಲ್ಲಿ ಯಾತ್ರಿಗಳು ಹಾಗೂ ಅಯ್ಯಪ್ಪ ಭಕ್ತರು ನೀಡುತ್ತಿರುವ ಸಹಕಾರ, ಬೆಂಬಲ ಸ್ಮರಣೀಯ ಎಂದರು.
ಟ್ರಸ್ಟ್ ಉಪಾಧ್ಯಕ್ಷ ಡಾ. ವಿಎಸ್ವಿ ಪ್ರಸಾದ ಮಾತನಾಡಿ, ದೇವಸ್ಥಾನದಲ್ಲಿ ಈವರೆಗೆ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಈ ವರ್ಷ ಕೈಗೊಳ್ಳುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು.
ಟ್ರಸ್ಟ್ ಕಾರ್ಯದರ್ಶಿ ಜಯರಾಮ ಶೆಟ್ಟಿ ಅವರು ಕಳೆದ ಸಾಲಿನ ಸರ್ವ ಸಾಧಾರಣ ಸಭೆಯ ನಡಾವಳಿ ವಾಚಿಸಿದರು. ಖಜಾಂಚಿ ಜಿ.ಎಸ್. ಅಯ್ಯರ್, 2019-20ನೇ ಸಾಲಿನ ವಾರ್ಷಿಕ ಅಢಾವೆ ಪತ್ರಿಕೆ ಮಂಡಿಸಿದರು. ಡಾ. ಸಮೀರಾಚಾರ್ಯ ಕಂಠಪಲ್ಲೀ ಶುಭ ಹಾರೈಸಿದರು. ಸೇವಾ ಸಮಿತಿ ಪರವಾಗಿ ಸಂಜೀವ ಸುಗತೆ ಮಾತನಾಡಿದರು. ಟ್ರಸ್ಟ್ನ ಎಲ್ಲ ಧರ್ಮದರ್ಶಿಗಳು, ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರದೀಪ ಶೆಟ್ಟಿ ಪ್ರಾರ್ಥನೆ ಹಾಡಿದರು. ಪ್ರಕಾಶ ರಾಯ್ಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.