

ಚನ್ನರಾಯಪಟ್ಟಣ: ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ 91 ನೇ ಜಾತ್ರಾ ಮಹೋತ್ಸವದ 5ನೇ ಹಾಗೂ ಅಂತಿನ ದಿನವಾದ ಬುಧವಾರ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಬೆಳಗ್ಗೆ 6 ಗಂಟೆಯಲ್ಲಿ ಶ್ರೀ ಬಸವೇಶ್ವರಸ್ವಾಮಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಪುಷ್ಪಾಲಂಕಾರ ಹಾಗೂ ನೈವೇಧ್ಯ ಸಮರ್ಪಣೆ ಕಾರ್ಯ ನಡೆಯಿತು. ಶ್ರೀ ಸ್ವಾಮಿಯ ಸರ್ಪ ವಾಹನೋತ್ಸವ ಜರುಗಿದ್ದು ಭಕ್ತರು ಉತ್ಸವ ಸಾಗಿದಂತೆಲ್ಲ ಕರ್ಪೂರ ಬೆಳಗಿಸಿ ಈಡುಗಾಯಿ ಒಡೆದರು.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ಕಲ್ಯಾಣಿಯಲ್ಲಿ ಗಂಗಾಪೂಜೆ ಕೈಗೊಂಡು ಹರಕೆ ಸಲ್ಲಿಸಿದರು. ಅಲ್ಲದೆ ದೇಗುಲದ ಮುಂಭಾಗದಲ್ಲಿ ಗಂಧ-ಕರ್ಪೂರ ಬೆಳಗಿಸಿ ಭಕ್ತಿ ಭಾವದಲ್ಲಿ ತೇಲಿದರು.
ಬೆಳಗ್ಗೆಯಿಂದಲೇ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ತಮ್ಮ ಜಾನುವಾರುಗಳನ್ನು ಸನ್ನಿಧಿಗೆ ಕರೆತಂದು ದೇಗುಲದ ಸುತ್ತ ಮೂರು ಬಾರಿ ಪ್ರದಕ್ಷಣೆಯೊಂದಿಗೆ ತೀರ್ಥ ಪ್ರೋಕ್ಷಣೆ ಮಾಡಿಸುತಿದ್ದ ವೈಭವದ ದೃಶ್ಯವು ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಿತು.
ಎಮ್ಮೆ ಹಾಗೂ ನಾಟಿ ಹಸುಗಳು ಕರು ಹಾಕಿದ್ದ ಮೊದಲ ದಿನ ಕರೆದ ಹಾಲನಿಂದ ಗಿಣ್ಣು ಅನ್ನ ಸಿದ್ಧಪಡಿಸಿಕೊಂಡು ತರುವ ಭಕ್ತರು ಕಲ್ಯಾಣಿಯಲ್ಲಿ ಪೂಜೆ ಸಲ್ಲಿಸುವುದು, ಹಾಲು, ಅಕ್ಕಿ-ಬೆಲ್ಲ ಹಾಗೂ ಹಣ್ಣು-ಕಾಯಿಗಳನ್ನು ದೇಗುಲಕ್ಕೆ ಅರ್ಪಿಸುವುದು ಇಲ್ಲಿನ ವಾಡಿಕೆ. ಅದರಂತೆಯೇ ಸಾವಿರಾರು ಭಕ್ತರು ಸರದಿ ಸಾಲಲ್ಲಿ ನಿಂತು ಭಕ್ತಿ ಸಮರ್ಪಿಸಿದರು.
ಧಾರ್ಮಿಕ ಕ್ಷೇತ್ರವಾದ ಇಲ್ಲಿ ಜಾತ್ರೆಯ ದಿನಗಳಲ್ಲಿ ಜಾನುವಾರುಗಳಿಗೆ ವಿಶೇಷ ಪೂಜೆ ಜರುಗಲಿದ್ದು ಹೊಸಾ ವಾಹನ ಖರೀದಿ ಮಾಡಿರುವ ಭಕ್ತರು ದೇಗುಲದ ಮುಂದೆ ನಿಲ್ಲಿಸಿ ಅರ್ಚಕರಿಂದ ವಿಶೇಷ ಪೂಜೆ ಮಾಡಿಸಿ ದೇಗುಲದ ಸುತ್ತ ಪ್ರದಕ್ಷಣೆ ಹಾಕಿದರು.
ಮಧ್ಯಾಹ್ನ 12 ಗಂಟೆಯಲ್ಲಿ ವೇದಿಕೆ ಮೇಲೆ ಜನಪ್ರಿಯ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮ ನಡೆಯಿತು. ಮಂಡ್ಯದ ಕಲಾ ತಂಡವೊಂದು ಹಾಸ್ಯದ ಜತೆಗೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿಯ ಶ್ರೀ ಶಿವಪುತ್ರನಾಥಸ್ವಾಮೀಜಿ, ಕಬ್ಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷ ಶಿವನಂಜೇಗೌಡ, ಗ್ರಾಮದ ಪ್ರಮುಖರಾದ ಗಣೇಶ್‌ಗೌಡ, ಜವರೇಗೌಡ ಹಾಗೂ ಇತರರು ಇದ್ದರು.