

ಬೇಲೂರು: ಪಟ್ಟಣದ ಶ್ರೀಚನ್ನಕೇಶವಸ್ವಾಮಿ ದೇಗುಲದ ಘನತ್ಯಾಜ್ಯ ನಿರ್ವಾಹಣಾ ಘಟಕವನ್ನು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ವೀಡಿಯೊ ಕಾನ್ಫರೆನ್ಸ್ ಮೂಲಕ ಶುಕ್ರವಾರ ಸಂಜೆ ಉದ್ಘಾಟಿಸಿದರು.
ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಡಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 12 ದೇಗುಲಗಳ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರು ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಇಲ್ಲಿ ದೇವರಿಗೆ ಮುಡಿಸುವ ಹೂ ಸೇರಿದಂತೆ ಇತರೆ ಘನತ್ಯಾಜ್ಯಗಳಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡಬಹುದಾಗಿದೆ. ಇದರಿಂದ ದೇಗುಲಕ್ಕೂ ಆದಾಯ ಬಂದಂತ್ತಾಗುತ್ತದೆ ಎಂದು ತಿಳಿಸಿದರು.
ಚನ್ನಕೇಶವಸ್ವಾಮಿ ದೇಗುಲ ಇಒ ವಿದ್ಯುಲತಾ ಮಾತನಾಡಿ, ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಅವರ ಆದೇಶದಂತೆ ಘನತ್ಯಾಜ್ಯ ನಿರ್ವಾಹಣಾ ಘಟಕವನ್ನು ನಿರ್ಮಿಸಲಾಗಿದ್ದು, ಸ್ವಚ್ಛತೆ ದೃಷ್ಠಿಯಿಂದ ಬಳಸುವುದು ಅವಶ್ಯಕವಾಗಿದೆ. ದೇಗುಲಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತರು ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ದೇಗುಲ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟರ್, ವ್ಯವಸ್ಥಾಪನಾ ಸಮಿತಿಯ ರವಿಶಂಕರ್, ಮೋಹನ್‌ಗೌಡ, ವಿಜಯಲಕ್ಷ್ಮಿ, ಪ್ರಮೋದ್ ಸೇರಿದಂತೆ ಸಿಬ್ಬಂದಿ ಇದ್ದರು.