ದೇಗುಲಗಳಲ್ಲಿ ಮೊಳಗಿತು ಘಂಟೆ ಶಬ್ದ

CTD BANNI 08
Published on

ಚಿತ್ರದುರ್ಗ, ಬಯಲುಸೀಮೆ, ದೇವಸ್ಥಾನ, ಬಾಗಿಲು, Chitradurga, plain, temple, door
ಚಿತ್ರದುರ್ಗ: ಎರಡೂವರೆ ತಿಂಗಳ ಲಾಕ್‌ಡೌನ್ ಬಳಿಕ ಜಿಲ್ಲಾದ್ಯಂತ ಬಹುತೇಕ ದೇಗುಲಗಳು ಸೋಮವಾರ ಬಾಗಿಲು ತೆರೆದವು.

ವಿವಿಧೆಡೆ ವಿದ್ಯುದ್ದೀಪ, ತಳಿರು ತೋರಣ, ತೆಂಗಿನ ಗರಿಗಳು, ಬಾಳೆಕಂದುಗಳೊಂದಿಗೆ ದೇವಸ್ಥಾನಗಳು ಅಲಂಕೃತವಾಗಿದ್ದವು.

ಬೆಳಗ್ಗೆ ಒಮ್ಮೆಗೆ ದೇವರಿಗೆ ವಿಶೇಷ ಅಭಿಷೇಕ, ಪೂಜೆ ಮಾಡಲಾಗಿತ್ತು. ಉಳಿದಂತೆ ಭಕ್ತರಿಗೆ ವಿಶೇಷ ಪೂಜೆ, ಮಂಗಳಾರತಿ, ತೀರ್ಥಪ್ರಸಾದ ಇಲ್ಲದೆ ಕೇವಲ ‘ದರ್ಶನಾಶೀರ್ವಾದ’ ಕ್ಕೆ ದೇವಸ್ಥಾನಗಳು ಸೀಮಿತವಾಗಿದ್ದವು.

ಕರೊನಾ ನಿಯಂತ್ರಣೆ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳ ಪಾಲನೆಗೆ ಆಯಾ ಟ್ರಸ್ಟ್‌ನವರು ಅಣಿ ಮಾಡಿಕೊಂಡಿದ್ದರು. ಥರ್ಮಲ್ ಸ್ಕ್ರೀನಿಂಗ್ ಕೊರತೆ ಕೆಲವೆಡೆ ಕಾಡಿತು. ಬೆಳಗ್ಗೆ ಸಮಾಧಾನಕರ ಸ್ಥಿತಿಯಲ್ಲಿದ್ದ ಭಕ್ತರ ಸಂದಣಿ, ನಂತರದಲ್ಲಿ ಇಳಿಮುಖವಾಗಿತ್ತು.

ಮಾಸ್ಕ್ ತಪ್ಪದೇ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, 65 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನವರಿಗೆ ದರ್ಶನಾವಕಾಶವಿಲ್ಲ ಎಂಬಿತ್ಯಾದಿ ಬರಹದ ಫಲಕಗಳು ದೇಗುಲಗಳ ಎದುರು ಕಂಡುಬಂದವು.

ಭಕ್ತರು ನಿಲ್ಲಲು ರೌಂಡ್ ಮಾರ್ಕಿಂಗ್, ಕೈಗೆ ಸ್ಯಾನಿಟೈಸರ್ ಹಾಕುವ ವ್ಯವಸ್ಥೆಯಿತ್ತು. ಹೂವು, ಹಣ್ಣು-ತೆಂಗಿನಕಾಯಿ ತರುವುದನ್ನು ನಿಷೇಧಿಸಲಾಗಿತ್ತು. ಗೃಹರಕ್ಷಕರು, ಟ್ರಸ್ಟ್‌ನವರೇ ಹೊರಗೆ ಸೂಚನೆಗಳನ್ನು ನೀಡುತ್ತಿದ್ದರು.

ನಗರದೇವತೆ ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಏಕನಾಥೇಶ್ವರಿ, ಕೊಲ್ಲಾಪುರದಮ್ಮ ಸೇರಿ ವಿವಿಧ ದೇವಸ್ಥಾನಗಳು ಪುನರ್ ಆರಂಭವಾಗಿದ್ದವು.

ಇವತ್ತು ಸೋಮವಾರ ಜನರು ಕಡಿಮೆ, ಮಂಗಳವಾರ-ಶುಕ್ರವಾರ ಸಂದಣಿ ಹೆಚ್ಚಾಗಲಿದೆ. ಬೆಳಗ್ಗೆ ಪಂಚಾಮೃತ ಅಭಿಷೇಕ ಮಾಡಿದ್ದು ಬಿಟ್ಟರೆ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಗಿಲ್ಲ ಎಂದು ದೇವಸ್ಥಾನದ ಅರ್ಚಕರು ವಿವರಿಸಿದರು.

ನಾಯಕನಹಟ್ಟಿ, ವದ್ದಿಕೆರೆ, ಹಿರಿಯೂರಿನ ತೇರುಮಲ್ಲೇಶ್ವರ, ಹೊಸದುರ್ಗ ತಾಲೂಕು ಹಾಲುರಾಮೇಶ್ವರ ದೇವಸ್ಥಾನದಲ್ಲೂ ಜನರ ಬರುವಿಕೆ ಕಡಿಮೆ ಇತ್ತು. ತೆಂಗಿನಕಾಯಿ ಒಡೆಯುವಂತಿಲ್ಲ. ಪ್ರದಕ್ಷಿಣೆ, ಗಂಟೆ ಬಾರಿಸಲು, ಕೂರಲು ಸಹ ಅವಕಾಶ ಇರಲಿಲ್ಲ.

ಹೋಟೆಲ್‌ಗಳ ವಹಿವಾಟು: ನಗರದ ವಿವಿಧ ಹೋಟೆಲ್‌ಗಳು, ಟೀ ಶಾಪ್ ಸೇರಿ ಅನೇಕ ಅಂಗಡಿ ಮುಂಗಟ್ಟುಗಳು ವಹಿವಾಟಿಗೆ ಅಣಿಯಾದವು. ಕರೊನಾ ಭಯಕ್ಕೆ ಹೋಟೆಲ್‌ಗಳ ಖಾದ್ಯ ರುಚಿ ಸವಿಯಲು ಜನಸಂದಣಿ ಅಷ್ಟಾಗಿ ಇರಲಿಲ್ಲ. ಬೀದಿಬದಿಯ ತಿಂಡಿ ಅಂಗಡಿಗಳಲ್ಲಿ ವ್ಯಾಪಾರ ಉತ್ತಮವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net