

ಮೈಸೂರು: ಗುರುಪೂರ್ಣಿಮೆ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ದೇವಸ್ಥಾನಗಳು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ವಿಧಿವಿಧಾನದ ಮೂಲಕ, ಶಾಲಾ-ಕಾಲೇಜುಗಳಲ್ಲಿ ಸಂಭ್ರಮದಿಂದ ಗುರುಪೂರ್ಣಿಮೆ ಆಚರಿಸಲಾಯಿತು. ಹಿಂದು ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದುಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಿಂದುಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸಿದರು.
ತ್ಯಾಗರಾಜ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರ, ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ಹೆಬ್ಬಾಳ್‌ನ ಶಿರಡಿ ಸಾಯಿ ಸೇವಾಶ್ರಮ ಟ್ರಸ್ಟ್, ರಾಮಕೃಷ್ಣನಗರದ ಶ್ರೀ ಪ್ರಸನ್ನ ಗಣಪ ಮತ್ತು ಶಿರಡಿ ಸಾಯಿ ಶಕ್ತಿ ಸನ್ನಿಧಿ ಚಾರಿಟಬಲ್ ಟ್ರಸ್ಟ್, ಮಹರ್ಷಿ ಪತಂಜಲಿ ಧ್ಯಾನ ಕೇಂದ್ರ, ಬೋಗಾದಿಯ ಶ್ರೀಯಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾದಿಂದ ಗುರುಪೂರ್ಣಿಮೆ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಪ್ರತಿಯೊಂದರ ಹಿಂದೆಯೂ ಗುರುವಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ಗುರುಪೂರ್ಣಿಮೆ ಆಚರಿಸಲಾಗುತ್ತಿದೆ. ಪ್ರತಿಯೊಂದರ ಹಿಂದೆ ಗುರುವಿನ ಅವಶ್ಯಕತೆವಿದ್ದು, ಗುರುವಿನ ಆಶೀರ್ವಾದವಿದ್ದರೆ ಎಲ್ಲವನ್ನು ಸಾಧಿಸಬಹುದು ಎಂದು ಹೇಳಿದರು.
ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಸುಶಮಿಂದ್ರತೀರ್ಥ ಸೇವಾ ಸಮಿತಿ ವತಿಯಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಮಿತಿ ಅಧ್ಯಕ್ಷ ನಾಗರಾಜು ಅವರು, ಭಾರತೀಯ ಪರಂಪರೆಯಲ್ಲಿ ಮಠಗಳ ಪಾತ್ರ ಅಮೋಘವಾಗಿದ್ದು, ಪ್ರತಿಯೊಂದು ಮಠಗಳಿಗೆ ಭಕ್ತರೇ ಆಧಾರ. ಧರ್ಮ, ಪರಂಪರೆ ಉಳಿಸಿಕೊಂಡು ಬರುವಲ್ಲಿ ಮಠಮಾನ್ಯಗಳ ಸೇವೆ ಅಮೋಘ. ಹೆತ್ತ ತಂದೆ ತಾಯಿ ಮತ್ತು ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಸುಶಮಿಂದ್ರತೀರ್ಥ ಸೇವಾ ಸಮಿತಿ ಉಪಾಧ್ಯಕ್ಷ ವರುಣ ಮಹದೇವ್, ಗೌರವಾಧ್ಯಕ್ಷ ಓಂಕಾರ್‌ಆನಂದ್, ಕಾರ್ಯದರ್ಶಿ ಮಹದೇವ್, ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಮಣ್ಯ, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಗಿರೀಶ್‌ಗೌಡ, ಮಹದೇವ್, ಸಂತೋಷ್ ಶಂಭು, ಪರಮೇಶ್ ಗೌಡ, ರವಿಚಂದ್ರ, ಸಂದೀಪ್, ನವೀನ್, ಸುಬ್ಬಣ್ಣ ಇನ್ನಿತರರು ಇದ್ದರು.