

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕಡೇ ಶ್ರಾವಣ ಶನಿವಾರದ ಅಂಗವಾಗಿ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಭಕ್ತರು ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು.
ಚಿಕ್ಕ ತಿರುಪತಿ ಎಂದೇ ಕರೆಯಲಾಗುವ ಹುಲಿಗಿನಮೊರಡಿ ವೆಂಕಟರಮಣಸ್ವಾಮಿ ಬೆಟ್ಟಕ್ಕೆ ಭಕ್ತರು ತೆರಳಿ ದೇವರ ದರ್ಶನ ಪಡೆದರು. ಮೊದಲ ಶ್ರಾವಣ ಶನಿವಾರದ ಪ್ರಯುಕ್ತ ಸಾಕಷ್ಟು ಬಸ್‌ಗಳ ವ್ಯವಸ್ಥೆ ಮಾಡಿದ್ದ ಸಾರಿಗೆ ಸಂಸ್ಥೆ, ಕಡೇ ಶ್ರವಾಣಕ್ಕೆ ಒಂದು ಬಸ್ಸನ್ನೂ ನಿಯೋಜಿಸದ ಕಾರಣ ಭಕ್ತರು ಆಟೋ ಹಾಗೂ ಟೆಂಪೋ ಅವಲಂಬಿಸಿದ್ದರು.
ಬಂಡೀಪುರ ಹುಲಿಯೋಜನೆಯ ಅರಣ್ಯ ಪ್ರದೇಶದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಭಕ್ತರ ದಂಡು ಹರಿದುಬಂದಿತು. ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸಿದ್ದರು. ಹೀಗಾಗಿ ಸಾರಿಗೆ ಸಂಸ್ಥೆ 15 ಬಸ್‌ಗಳನ್ನು ನಿಯೋಜಿಸಿದ್ದರೂ ದೇವಸ್ಥಾನಕ್ಕೆ ಹೋಗಲು ಗಂಟೆಗಟ್ಟಲೆ ಕಾಯುವಂತಾಗಿತ್ತು. ಸುಮಾರು 7 ಸಾವಿರ ಭಕ್ತರು ಆಗಮಿಸಿದ್ದರಿಂದ ಸಾರಿಗೆ ಸಂಸ್ಥೆಗೆ 4.5 ಲಕ್ಷ ರೂ. ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ನೇತೃತ್ವದಲ್ಲಿ ಗೋಪಾಲನಿಗೆ ವಿಶೇಷ ಪೂಜೆ ನೆರವೇರಿದವು. ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.