ದೇಗುಲಗಳಲ್ಲಿ ಆಷಾಢ ಏಕಾದಶಿ ಪೂಜೆ

Venkataramana Swamy
Published on

ಚಿತ್ರದುರ್ಗ: ಜಿಲ್ಲೆ ಸೇರಿ ನಗರದ ಹಲವು ವೆಂಕಟರಮಣ, ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇಗುಲಗಳಲ್ಲಿ ಬುಧವಾರ ದೇವಶಯನಿ ಆಷಾಢ ಏಕಾದಶಿ ಅಂಗವಾಗಿ ವಿಶೇಷ ಪೂಜೆ, ಹರಿನಾಮ ಸ್ಮರಣೆ, ಆರಾಧನೆ ಶ್ರದ್ಧಾ-ಭಕ್ತಿಯಿಂದ ಜರುಗಿತು. ಅಲ್ಲದೆ, ಚಾತುರ್ಮಾಸ ಪೂಜೆ ಆರಂಭವಾಯಿತು.

ಮುಂಜಾನೆ ಸ್ವಾಮಿಯ ದೇಗುಲಗಳಲ್ಲಿ ವಿಷ್ಣು ಸಹಸ್ರನಾಮ, ಅಭಿಷೇಕ, ಪಂಚಫಲ ಅಭಿಷೇಕ, ನೈವೇದ್ಯ, ತುಳಸಿ ಸೇರಿ ಸೌಗಂಧಭರಿತ ವಿವಿಧ ಪುಷ್ಪ ಮಾಲೆಗಳಿಂದ ಅಲಂಕಾರ ಸೇವೆ, ಸಕಲಾಭರಣ ತೊಡಿಸಿ ಭಕ್ತರ ಕಣ್ಮನ ಸೆಳೆಯುವಂತೆ ಅಲಂಕಾರ ಸೇವೆ ನೆರವೇರಿದವು.

ನಗರದ ತುರುವನೂರು ರಸ್ತೆಯ ಐತಿಹಾಸಿಕ ವೆಂಕಟರಮಣ ಸ್ವಾಮಿ, ಆನೆಬಾಗಿಲು ಸಮೀಪದ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ, ಬಸವೇಶ್ವರ ವೃತ್ತದ ವೆಂಕಟೇಶ್ವರಸ್ವಾಮಿ, ವಾಸವಿ ವಿದ್ಯಾಸಂಸ್ಥೆ ಸಮೀಪದ ಲಕ್ಷ್ಮೀನರಸಿಂಹಸ್ವಾಮಿ, ಶ್ರೀರಾಮ ದೇವರ ಸನ್ನಿಧಾನಗಳಲ್ಲಿ ವಿಶೇಷವಾಗಿ ಆಶಾಢ ಏಕಾದಶಿ ಆಚರಿಸಲಾಯಿತು.

ಪ್ರಥಮ ಏಕಾದಶಿ ಅಂಗವಾಗಿ ಇತರೆ ದೇಗುಲಗಳಲ್ಲೂ ವಿಶೇಷ ಅಲಂಕಾರ ಸೇವೆ, ಪೂಜೆ ನೆರವೇರಿದವು. ಭೇಟಿ ನೀಡಿದ ನೂರಾರು ಭಕ್ತರು ಹಣ್ಣು, ಕಾಯಿ, ಹೂವು ಸಮರ್ಪಿಸಿ, ದೇವರ ದರ್ಶನ ಪಡೆದು ಪುನೀತರಾದರು. ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿಕೊಂಡರು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಿಸಲಾಯಿತು.

ಹಲವರು ಮನೆಗಳಲ್ಲೂ ಏಕಾದಶಿ ವ್ರತಾಚರಣೆಯಲ್ಲಿ ನಿರತರಾದರು. ದಿನವಿಡೀ ಉಪವಾಸವಿದ್ದು, ಪರಮಾತ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮೂರು ದಿನದ ಆಚರಣೆ: ಆಷಾಢ ಏಕಾದಶಿಯನ್ನು ಜಿಲ್ಲೆಯ ಕೆಲ ಭಾಗಗಳಲ್ಲಿ ಮೂರು ದಿನ ವಿಶೇಷವಾಗಿ ಆಚರಿಸಲಾಗುತ್ತದೆ. ಮನೆಗಳಲ್ಲಿ ವಿವಿಧ ರೀತಿಯ ದವಸ-ಧಾನ್ಯಗಳಿಂದ ಉಂಡೆಗಳನ್ನು ತಯಾರಿಸಿ, ಅದರ ಜೊತೆಗೆ ಹಣ್ಣುಗಳನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ರೀತಿ ಆಚರಿಸಿದವರು ನಂತರ ಸಂಬಂಧಿಗಳು, ನೆರೆಹೊರೆಯವರು, ಹಿತೈಷಿಗಳಿಗೆ ಉಂಡೆಗಳನ್ನು ವಿತರಿಸುವ ವಾಡಿಕೆಯಿದೆ. ಇನ್ನೂ ಕೆಲವೆಡೆ ಹಸುಗಳಿಗೆ ಅಕ್ಕಿ, ಬೆಲ್ಲ, ಹಣ್ಣು ಅರ್ಪಿಸಿ ಪೂಜೆ ಸಲ್ಲಿಸುವ ಪದ್ಧತಿ ಈಗಲೂ ರೂಢಿಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net