ದೇಗುಲಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ

VHP
Published on

ಚಿತ್ರದುರ್ಗ: ಹಿಂದು ಧಾರ್ಮಿಕ ಕೇಂದ್ರಗಳು, ತೀರ್ಥ ಕ್ಷೇತ್ರಗಳು ಪವಿತ್ರ ಶ್ರದ್ಧಾಕೇಂದ್ರಗಳಾಗಿವೆ. ಹೀಗಾಗಿ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು. ಭಕ್ತರ ನಿರ್ವಹಣೆಗೆ ಒಪ್ಪಿಸಬೇಕು ಎಂದು ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ತಿರುಪತಿ ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿ ಹಿಂದುಗಳ ಶ್ರದ್ಧೆಗೆ, ಭಕ್ತಿಗೆ ನೋವುಂಟು ಮಾಡಲಾಗಿದೆ. ಆದ್ದರಿಂದ ರಾಜ್ಯದ ಎಲ್ಲ ಮಂದಿರಗಳನ್ನು ಭಕ್ತರ ನಿರ್ವಹಣೆಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ವಿಎಚ್‌ಪಿ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಮಾತನಾಡಿ, ತಿರುಪತಿಯ ತಿಮ್ಮಪ್ಪ ದೇಶದ ಕೋಟ್ಯಾಂತರ ಹಿಂದುಗಳ ಆರಾಧ್ಯ ದೈವ. ಅಲ್ಲಿ ವಿತರಿಸುತ್ತಿದ್ದ ಲಡ್ಡು ಪ್ರಸಾದದ ಕುರಿತು ಅನಾದಿ ಕಾಲದಿಂದಲೂ ಅಪಾರ ನಂಬಿಕೆ ಇದೆ. ಆದರೆ, ಇತ್ತೀಚೆಗೆ ಲಡ್ಡು ತಯಾರಿಕೆಗೆ ಪೋಷಕಾಂಶ ಹೆಚ್ಚಿರುವ ಹಸುವಿನ ತುಪ್ಪದ ಬದಲು ಹಿಂದಿನ ಸರ್ಕಾರದ ಅವಧಿಯಲ್ಲಿ ಗೋಮಾಂಸದ, ಹಂದಿಯ ಚರ್ಮದ ಕೊಬ್ಬು, ಮೀನಿನ ಎಣ್ಣೆ ಬೆರೆಸುತ್ತಿದ್ದರೆಂಬ ವಿಷಯ ಬೆಳಕಿಗೆ ಬಂದಿರುವುದು ವೈಷ್ಣವ ಪರಂಪರೆಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಭ್ರಷ್ಟರು ದುರುದ್ದೇಶ, ತಮ್ಮ ಸ್ವಾರ್ಥಕ್ಕಾಗಿ ಧರ್ಮಕ್ಕೆ ದ್ರೋಹ ಎಸಗಿದ್ದಾರೆ. ಕೋಟ್ಯಾಂತರ ಹಿಂದುಗಳ ಮನಸ್ಸಿಗೆ ಘಾಸಿ ಉಂಟುಮಾಡಿದ್ದಾರೆ. ಈ ಕಾರ್ಯಕ್ಕೆ ಮುಂದಾದವರು ಬಲವಂತದ ಮತಾಂತರಕ್ಕೆ ಹುನ್ನಾರ ನಡೆಸುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ದೂರಿದರು.

ಭಕ್ತರು ದೇಗುಲಗಳಿಗೆ ಕಾಣಿಕೆ, ಹರಕೆ ರೂಪದಲ್ಲಿ ಸಮರ್ಪಿಸುವ ದೇಣಿಗೆಯೂ ಕೆಲವೆಡೆ ದುರುಪಯೋಗ ಆಗುತ್ತಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳು ಹುಂಡಿ ಹಣವನ್ನು ಧರ್ಮದ ವಿರುದ್ಧ ಬಳಸುತ್ತಿದ್ದಾರೆ. ಭಕ್ತರ ಭಾವನೆ ಜತೆಗೆ ಆಟವಾಡಲು ಮುಂದಾಗುತ್ತಿದ್ದಾರೆ ಎಂದು ಬೇಸರಿಸಿದರು.

ಸರ್ಕಾರ ಅನ್ಯ ಧರ್ಮೀಯರ ಧಾರ್ಮಿಕ ಕೇಂದ್ರಗಳ ಮೇಲೆ ಹಿಡಿತ ಸಾಧಿಸುತ್ತಿಲ್ಲ. ಬದಲಿಗೆ ಹಿಂದು ದೇಗುಲಗಳು, ಅದರಲ್ಲೂ ಹೆಚ್ಚು ಆದಾಯ ದೊರೆಯುವ ಮಂದಿರಗಳ ಮೇಲೆ ನಿಯಂತ್ರಣ ಸಾಧಿಸುತ್ತಿವೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಹಿಂದು ದೇಗುಲಗಳ ಆದಾಯವನ್ನು ಹಿಂದು ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿರುವ ಕುರಿತು ಆರೋಪ ಕೇಳಿಬರುತ್ತಿವೆ. ಅಂತಹ ಸಂಘಟನೆಗಳಿಗೆ ದೇಣಿಗೆ ನೀಡುತ್ತಿರುವ ಸರ್ಕಾರದ ನಡೆ ಖಂಡನೀಯ. ಆದ್ದರಿಂದ ರಾಜ್ಯದ ಎಲ್ಲ ದೇಗುಲಗಳನ್ನು ಭಕ್ತರ ನಿರ್ವಹಣೆಗೆ ವಹಿಸಬೇಕು ಎಂದು ಕೋರಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಬಿಜೆಪಿ ಮುಖಂಡರಾದ ಜಿ.ಎಸ್. ಅನಿತ್‌ಕುಮಾರ್, ಉಮೇಶ್ ಕಾರಜೋಳ, ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್, ಮುಖಂಡರಾದ ಬದರಿನಾಥ್, ನಯನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net