

ಕಿಕ್ಕೇರಿ: ದೇಗುಲಗಳು ಮಾನಸಿಕವಾಗಿ ನೆಮ್ಮದಿ ಮತ್ತು ಶಾಂತಿ ನೀಡುವ ಪುಣ್ಯ ಸ್ಥಳ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಹೋಬಳಿಯ ಸಾಸಲು ಗ್ರಾಮದಲ್ಲಿ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲಗಳ ಮರು ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು, 2ಕೋಟಿ ರೂ. ಅನುದಾನದಲ್ಲಿ ದೇಗುಲ ಮರು ನಿರ್ಮಾಣವಾಗುತ್ತಿದೆ ಎಂದರು.
ಪುರಾತತ್ವ ಇಲಾಖೆಯಿಂದ ದೇಗುಲ ನಿರ್ಮಾಣವಾಗುತ್ತಿದ್ದು, ಗುಣಾತ್ಮಕ ಮತ್ತು ತ್ವರಿತವಾಗಿ ನಿರ್ಮಾಣ ಮಾಡುವತ್ತ ಗುತ್ತಿಗೆದಾರರು ಎಚ್ಚರಿಕೆ ವಹಿಸಬೇಕಿದೆ. ಅಲ್ಲದೆ ದೇಗುಲ ನಿರ್ಮಾಣದಲ್ಲಿ ರಾಜಕೀಯ ಬೇಡ ಎಂದು ತಾಕೀತು ಮಾಡಿದರು.
ಯಾತ್ರಿ ನಿವಾಸ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಾಡಾಗುತ್ತಿದೆ. ಹಾಗಾಗಿ, ಸ್ಥಳೀಯರಿಗೆ ಉಪಗುತ್ತಿಗೆ, ನಿರ್ವಹಣೆ ಕೊಡುವುದು ಬೇಡ ಎಂದು ಗ್ರಾಮಸ್ಥರು ನಿವೇದಿಸಿಕೊಂಡರು.
ಗಣಪತಿ, ನವಗ್ರಹ ಮತ್ತಿತರ ಹೋಮ, ಪೂಜೆಗಳು ನಡೆದವು. ಬಳಿಕ ದೇವರ ಕಳಾಕರ್ಷಣೆ ಮಾಡಲಾಯಿತು. ಬೇಬಿ ಬೆಟ್ಟದ ಶಿವಬಸವ ಸ್ವಾಮೀಜಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ತಹಸೀಲ್ದಾರ್ ನಿಸರ್ಗಪ್ರಿಯಾ, ಉಪತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮಲೆಕ್ಕಿಗ ಪ್ರಸನ್ನ, ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕೀರಾಂ, ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಐನೋರಹಳ್ಳಿ ಮಲ್ಲೇಶ್, ಈರಾಜು, ಶ್ರೀನಾಥ್, ಈರಪ್ಪ, ನಾಗೇಶ್, ರವಿ, ಷಣ್ಮುಖ, ಭಾಗ್ಯಮ್ಮ ಮತ್ತಿತರರಿದ್ದರು.