

ಹಾಸನ: ನಗರದ ಸಮೀಪ ಎಸ್‌ಎಂ ಕೃಷ್ಣ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ನೀಲಕಂಠೇಶ್ವರ ಪಾರ್ವತಮ್ಮ ದೇವಿ ದೇವಾಲಯದ ಕಟ್ಟಡದ ಕೆಲಸವು ಪ್ರಗತಿಯಲ್ಲಿದ್ದು, ಈಗಾಗಲೇ 40 ಲಕ್ಷ ರೂ. ಕಾಮಗಾರಿ ಮುಗಿದಿದೆ. ಕುಲಬಾಂಧವರು ಧನ ಸಹಾಯ ಮಾಡುವ ಮೂಲಕ ದೇವಸ್ಥಾನದ ಕೆಲಸ ಮುಗಿಸಲು ಸಹಕಾರ ನೀಡುವಂತೆ ಕುರುಹಿನಶೆಟ್ಟಿ ಕೇಂದ್ರ ಸಂಘದ ಉಪಾಧ್ಯಕ್ಷ ಜಿ. ಸೋಮಶೇಖರ್ ಮನವಿ ಮಾಡಿದರು.
ನಗರದ ರಂಗೋಲಿ ಹಳ್ಳದಲ್ಲಿರುವ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘ ಹಾಗೂ ಮಹಿಳಾ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಉತ್ತಮ ಜಾಗದಲ್ಲಿ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯ ಹಾಗೂ ನಮ್ಮ ಸಮುದಾಯದ 8 ಸಾವಿರ ಜನರಿಗೆ ನಿವೇಶನ ಮಾಡಿಕೊಡಬೇಕು ಎನ್ನುವ ಉದ್ದೇಶವನ್ನು ಪುಟ್ಟಸ್ವಾಮಿ ಶೆಟ್ಟರು ಹೊಂದಿದ್ದರು. ಈಗಾಗಲೇ ಎಸ್.ಎಂ. ಕೃಷ್ಣ ನಗರದ ಬಡಾವಣೆ ಜಾಗದಲ್ಲಿ ದೇವಸ್ಥಾನದ ಕೆಲಸ ದಾನಿಗಳ ಸಹಾಯದಿಂದ ನಡೆಯುತ್ತಿದೆ ಎಂದು ತಿಳಿಸಿದರು.
ಇನ್ನು ಅಂದಾಜು ಎರಡು ಕೋಟಿ ರೂ.ಗಳ ಕೆಲಸ ಬಾಕಿ ಇದ್ದು, ರಾಜ್ಯದಲ್ಲಿರುವ ನಮ್ಮ ಸಮುದಾಯದ ಬಾಂಧವರಿಂದ ಹಣ ಸಂಗ್ರಹಿಸಿ, ಎಲ್ಲರ ಸಹಕಾರದಲ್ಲಿ ಕಾಮಗಾರಿ ಪೂರೈಸಬೇಕಾಗಿದೆ. ಹಾಗೆಯೇ ಒಂದು ವಿದ್ಯಾಸಂಸ್ಥೆಯನ್ನು ನಿರ್ಮಿಸಲು ಸಂಘದ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘದ ಪ್ರಧಾನ ಕಾರ್ಯದರ್ಶಿ ರಾಮಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೀಲಕಂಠೇಶ್ವರ ದೇವಾಲಯ ನಿರ್ಮಾಣ ಪ್ರಾರಂಭಿಸಿ ಮೂರು ವರ್ಷ ಆಗಿದೆ. ಸಭೆ ಕರೆದಾಗ ಪ್ರತಿಭಾ ಪುರಸ್ಕಾರ ಮಾಡಲು ಹೇಳಿದ್ದರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ನಮ್ಮ ಸಮುದಾಯದಲ್ಲಿ ಒಟ್ಟು 50 ಲಕ್ಷ ಜನರು ಇದ್ದು, ಒಬ್ಬರೂ 1 ರೂ. ಕೊಟ್ಟರೂ 50 ಲಕ್ಷ ರೂ. ಸಂಗ್ರಹವಾಗುತ್ತದೆ. ಶ್ರೀ ನೀಲಕಂಠೇಶ್ವರ ದೇವಸ್ಥಾನ ಕಟ್ಟಲು ಮುಂದಾಗಿದ್ದು, ಎಲ್ಲರ ಸಹಕಾರ ಅವಶ್ಯಕವಾಗಿ ಬೇಕಾಗಿದೆ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ನೇಕಾರ ಕುರುಹಿನಶೆಟ್ಟಿ ಸಂಘದ ದಾವಣಗೆರೆ ಖಜಾಂಚಿ ವಿಠಲ್ ಆಮಾಸಿ, ಕೇಂದ್ರ ಸಂಘದ ಖಜಾಂಚಿ ದೊರೆಸ್ವಾಮಿ, ಸಿಟಿ ಡ್ರಗ್ ಹೌಸ್ ಮಾಲೀಕ ಜಿ.ಕೆ. ನಾರಾಯಣಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮ ಶೆಟ್ಟಿ, ನಗರಸಭೆ ಮಾಜಿ ಸದಸ್ಯ ಬಿ. ಗೋಪಾಲ್, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಸಂಘದ ಉಪಾಧ್ಯಕ್ಷ ಕುಮಾರ್, ಗೋವಿಂದ ಶೆಟ್ಟಿ, ಜಿಲ್ಲಾ ನೇಕಾರ ಕುರುಹಿನಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ರತ್ನಾ ವೆಂಕಟೇಶ್, ಸಂಘದ ಖಜಾಂಚಿ ಕೆ.ಟಿ. ಲಕ್ಷ್ಮಣ್ ಶೆಟ್ಟಿ, ಕಾರ್ಯದರ್ಶಿ ಮಲ್ಲೇಶ್, ಜಿಲ್ಲಾ ಸಂಚಾಲಕ ಪುಟ್ಟಣ್ಣ ಗೋಕಾಕ್, ನಿವೃತ್ತ ಇಂಜಿನಿಯರ್ ತಿಮ್ಮಶೆಟ್ಟಿ ಇತರರು ಉಪಸ್ಥಿತರಿದ್ದರು.