

ಚಾಮರಾಜನಗರ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗಾಗಿ ಆಗ್ರಹಿಸಿ, ದೆಹಲಿಯಲ್ಲಿ ಅಮರಣಾಂತ ಉಪವಾಸ ಕೈಗೊಂಡಿರುವ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ ಹೋರಾಟ ಬೆಂಬಲಿಸಿ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಪ್ರಧಾನ ಮಂತ್ರಿ, ಕೇಂದ್ರ ಕೃಷಿ ಸಚಿವರ ಪ್ರತಿಕೃತಿ ಹಿಡಿದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೊರಟರು. ಈ ವೇಳೆ ಪೊಲೀಸರು ಪ್ರತಿಕೃತಿಗಳನ್ನು ವಶಕ್ಕೆ ಪಡೆಯಲು ಮುಂದಾದರು. ಈ ಸಂದರ್ಭದಲ್ಲಿ ಕೆಲಕಾಲ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ ಉಂಟಾಯಿತು. ಆದರೂ ಪೊಲೀಸರು ಪ್ರತಿಕೃತಿಗಳನ್ನು ವಶಕ್ಕೆ ಪಡೆದರು. ಪ್ರತಿಭಟನಾಕಾರರು ಪೋಲಿಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಳ್ಳಿ ಮಹದೇವಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಉಡಿಗಾಲ ಸುಂದರಪ್ಪ , ಅರಿಶಿನ ಬೆಳೆಗಾರರ ಸಂಘದ ಸಂಚಾಲಕ ಗುಂಡ್ಲುಪೇಟೆ ನಾಗಾರ್ಜುನ್ ಮಾತನಾಡಿ,
ರಾಜ್ಯದಾದ್ಯಂತ ದೆಹಲಿ ಹೋರಾಟ ಬೆಂಬಲಿಸಿ ಕೇಂದ್ರ ಸರ್ಕಾರದ ಗಮನಸೆಳೆಯಲು ಪ್ರಧಾನ ಮಂತ್ರಿ ಹಾಗೂ ಕೃಷಿ ಮಂತ್ರಿಯವರ ಪ್ರತಿಕೃತಿ ದಹನ ಚಳುವಳಿ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ, ಕೇಂದ್ರ ಕೃಷಿ ಸಚಿವರ ಪ್ರತಿಕೃತಿ ದಹನ ಮಾಡಲು ಮುಂದಾದಾಗ ಪೋಲಿಸರು ಪ್ರತಿಕೃತಿಗಳನ್ನು ವಶಕ್ಕೆ ಪಡೆಯುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ರೈತರ ಹಕ್ಕುಗಳಿಗಾಗಿ ದೆಹಲಿಯಲ್ಲಿ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ರಾಜ್ಯದ ಸಂಸದರು ಯಾವುದೇ ರೀತಿ ಧ್ವನಿ ಎತ್ತುತ್ತಿಲ್ಲ. ದಲ್ಲೆವಾಲ ಅವರಿಗೆ ತೊಂದರೆ ಉಂಟಾದರೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲಬೆಲೆ ಘೋಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಬೆಳೆವಿಮೆ ಪದ್ದತಿ ಬದಲಾಗಬೇಕು.ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣೆ ಯೋಜನೆಯನ್ನು ತತ್‌ಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ಸತೀಶ್, ತಾಲೂಕು ಉಪಾಧ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ, ಕೋಣನೂರು ನಾಗೇಂದ್ರ, ಬಾಲು, ಗುರುಸ್ವಾಮಿ, ಯರಿಯೂರು ಮಹೇಶ್, ಇಂದುವಾಡಿ ಮಾದೇಶ್, ಬಲರಾಮು, ಉಗನೇದಹುಂಡಿ ಶಿವಣ್ಣ ಇತರರು ಭಾಗವಹಿಸಿದ್ದರು.