

ಮೈಸೂರು: ಅಂಬೇಡ್ಕರ್ ಮತ್ತು ಭಗತ್‌ಸಿಂಗ್ ಅವರ ಭಾವಚಿತ್ರ ತೆರವುಗೊಳಿಸಿರುವ ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ ಅವರ ಕ್ರಮ ಖಂಡಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಬಿಜೆಪಿ, ಆರ್‌ಎಸ್‌ಎಸ್ ಹಾಗೂ ದೆಹಲಿ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, ಮುಖ್ಯಮಂತ್ರಿಯಾದ 2ನೇ ದಿನಕ್ಕೆ ರೇಖಾಗುಪ್ತಾ ಅವರು ದೆಹಲಿ ವಿಧಾನಸೌಧ ಸಭಾಂಗಣದಲ್ಲಿ ಮತ್ತು ಸಿಎಂ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ತೆಗೆಯುವ ಮೂಲಕ ಬಿಜೆಪಿ, ಆರ್‌ಎಸ್‌ಎಸ್‌ನ ಮನಸ್ಥಿತಿ ಏನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಕಿಡಿಕಾರಿದರು.
ಈ ಬಗ್ಗೆ ಬಿಜೆಪಿಯಲ್ಲಿರುವ ದಲಿತ ಮುಖಂಡರು ಮಾತನಾಡಬೇಕಿದೆ. ಬಿಜೆಪಿ ಗುಲಾಮಗಿರಿ ಮಾಡುತ್ತಿರುವ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಈಗ ಮಾತನಾಡಲಿ ಎಂದು ಸವಾಲು ಹಾಕಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಅಂಬೇಡ್ಕರ್ ಭಾವಚಿತ್ರ ತೆಗೆಯುವ ಮೂಲಕ ಬಿಜೆಪಿ ತನ್ನ ಮನುಸ್ಮತಿ ಸಂಸ್ಕೃತಿಯನ್ನು ಪ್ರದರ್ಶಿಸಿದೆ. ದಲಿತರನ್ನು ಹೊಡೆಯಲು ದಲಿತರನ್ನೇ ಎತ್ತಿಕಟ್ಟಿ ಅವರ ಮೂಲಕವೇ ಹೇಳಿಕೆ ಕೊಡಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರಿಗೆ ದಲಿತರನ್ನು ಹೇಗೆ ವಿಭಜಿಸಬೇಕು ಎಂಬುದು ಗೊತ್ತು. ಅದಕ್ಕಾಗಿ ಹಲವಾರು ತಂತ್ರ ಮಾಡುತ್ತಿದೆ ಎಂದು ದೂರಿದರು.
ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ದೆಹಲಿ ಸಿಎಂ ಅಂಬೇಡ್ಕರ್, ಭಗತ್ ಸಿಂಗ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು. ವಕೀಲರಾದ ಪರಂಜ್ಯೋತಿ, ತನುಜಾ ಮಹೇಶ್, ಕೋಮಲ, ಪುಟ್ಟಸಿದ್ದೇಗೌಡ, ಚಂದ್ರಶೇಖರ್, ಕಾಂತರಾಜು, ಜಿಪಂ ಮಾಜಿ ಉಪಾಧ್ಯಕ್ಷ ಸುಬ್ಬಯ್ಯ, ಕಾಂಗ್ರೆಸ್ ಮುಖಂಡರಾದ ಈಶ್ವರ್ ಚಕ್ಕಡಿ, ರಾಜೇಶ್, ಬಿಎಸ್‌ಪಿ ಮುಖಂಡ ಚಂದ್ರಶೇಖರ್, ನಾಯಕ ಸಂಘದ ಅಧ್ಯಕ್ಷ ದ್ಯಾವಪ್ಪ ನಾಯಕ, ಚನ್ನಕೇಶವಮೂರ್ತಿ, ಮುರಳಿ, ಮುದ್ದುಮಾದಯ್ಯ, ಸೋಮರಾಜ್, ಜಯ ಸುಂದರ್ ಇನ್ನಿತರರಿದ್ದರು