

ಚಾಮರಾಜನಗರ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಮೂಲಕ ದೇಶಕ್ಕೆ ಸಂದೇಶ ರವಾನಿಸಿದೆ ಎಂದು ಕಾಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಿಜಗುಣರಾಜು ಹೇಳಿದರು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಪಡೆದ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೆಹಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಈ ಮೂಲಕ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆಗೆ ಏರಿದೆ. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ದೇಶದ ಜನರು ನರೇಂದ್ರ ಮೋದಿ ಅವರ ಆಡಳಿತ ಹಾಗೂ ಯೋಜನೆಗಳನ್ನು ಮೆಚ್ಚಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ ಎಂದರು.
ದೇಶಕ್ಕೆ ಬಿಜೆಪಿ ಸೂಕ್ತವಾದ ಪಕ್ಷ ಎಂದು ಜನರು ತೀರ್ಮಾನಿಸಿ ದೆಹಲಿಯ ಮೂಲಕ ದೇಶಕ್ಕೆ ಸಂದೇಶ ರವಾನಿಸಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಜನರ ಕಣ್ಣಿಗೆ ಮಣ್ಣೆರಚುವಂತೆ ಮಾಡಿದ್ದಾರೆ. ಅರವಿಂದ್ ಕ್ರೇಜಿವಾಲ್ ಅವರ ಹಗರಣವನ್ನು ಜನರು ಹತ್ತಿರದಿಂದ ನೋಡಿ ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಇದೇ ರೀತಿ ದೇಶದಲ್ಲಿ ಮುಂಬರುವ ದಿನ ಸಂಪೂರ್ಣವಾಗಿ ಕಾಂಗ್ರೆಸ್ ಮುಕ್ತ ದೇಶವನ್ನಾಗಿ ಮಾಡಲು ಜನರು ಕಾತುರರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಡ್ನಾಕೂಡು ಪ್ರಕಾಶ್, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯ ಕುಮಾರ್, ಮಂಡಲದ ಅಧ್ಯಕ್ಷ ಶಿವರಾಜು, ಎಸ್.ಮೂರ್ತಿ, ವೇಣುಗೋಪಾಲ್, ನಾಗೇಂದ್ರ, ಚಂದ್ರು, ಬಸವರಾಜು, ಕಾಡಹಳ್ಳಿ ಕುಮಾರ್ ಹಾಗೂ ಕಾರ್ಯಕರ್ತರು ಹಾಜರಿದ್ದರು.