

ಮಂಡ್ಯ: ನಾವು ಮಾಡುವ ಯೋಚನೆ ವಿಭಿನ್ನವಾಗಿರಬೇಕು. ನಮ್ಮ ದೃಷ್ಟಿಕೋನ ಬದಲಿಸಿಕೊಂಡರೆ ಸಾಧನೆಯ ಜತೆಗೆ ಇನ್ನೊಬ್ಬರಿಗೆ ಮಾದರಿಯಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒಗಳಿಗೆ ಆಯೋಜಿಸಿದ್ದ ಕೆಡಿಪಿ ಸಭೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷರು ಸೇರಿದಂತೆ ಸದಸ್ಯರು ವಿಭಿನ್ನ ಆಲೋಚನೆ ಮಾಡಬೇಕು. ಸರ್ಕಾರದ ಯೋಜನೆಯನ್ನು ಬಳಸಿಕೊಂಡು ಯಶಸ್ವಿ ಕೆಲಸ ಮಾಡಬಹುದು. ಇದರಿಂದ ಗ್ರಾಮದ ಅಭಿವೃದ್ಧಿ ಜತೆಗೆ ಬೇರೆ ಗ್ರಾ.ಪಂ, ಜಿಲ್ಲೆಯವರಿಗೂ ಮಾದರಿಯಾಗಬಹುದು. ಅಂತೆಯೇ, ನಿಮ್ಮ ಕೆಲಸವನ್ನು ರಾಜ್ಯದಲ್ಲಿಯೇ ಅನುಷ್ಠಾನಗೊಳಿಸಬಹುದು. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಜಿಲ್ಲೆಯ ಕೆಲ ಗ್ರಾ.ಪಂನಲ್ಲಿ ಉತ್ತಮ ಅಭಿವೃದ್ಧಿ ಕೆಲಸ ನಡೆಯುತ್ತಿವೆ. ಅದಕ್ಕೆ ತಕ್ಕಂತೆ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಇದು ಎಲ್ಲ ಕಡೆಯೂ ಆಗಬೇಕು. ಪ್ರಶಸ್ತಿ ಪಡೆಯಲು ಪೈಪೋಟಿ ನೀಡಬೇಕು. ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ಸರ್ಕಾರದಿಂದಲೇ ನೀಡಿರುವ ಸೂಚನೆಯಂತೆ ಕಡ್ಡಾಯವಾಗಿ ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ಭಾಗವಹಿಸಬೇಕು. ಒಂದು ವೇಳೆ ಬಾರದಿದ್ದರೆ ಅದನ್ನು ಪ್ರಶ್ನಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ತಮ್ಮ ಇಲಾಖೆಯಲ್ಲಿರುವ ಯೋಜನೆಯ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಅದನ್ನು ತಿಳಿದುಕೊಂಡು ನಿಮ್ಮ ಗ್ರಾಮದಲ್ಲಿ ಅನುಷ್ಠಾನಗೊಳಿಸಬೇಕು ಎಂದರು.
ಹೊಸ ಆಲೋಚನೆ ಮಾಡಿ: ಸಹಕಾರ ಕ್ಷೇತ್ರದಲ್ಲಿ ಮಂಡ್ಯ ದೇಶಕ್ಕೆ ಮಾದರಿ ಎನ್ನಿಸಿಕೊಂಡಿರುವಂತೆ ಗ್ರಾ.ಪಂ ಕ್ಷೇತ್ರದಿಂದಲೂ ಗುರುತಿಸಿಕೊಳ್ಳುವಂತಾಗಬೇಕು. ಇದು ಸಾಧ್ಯವಾಗಬೇಕಾದರೆ ಹೊಸ ಆಲೋಚನೆ ಮಾಡಿ ಯೋಜನೆ ಅನುಷ್ಠಾನಗೊಳಿಸಬೇಕು. ಅಂತೆಯೇ, ಸ್ವಚ್ಛತೆಯ ಕಡೆಗೆ ಆಸಕ್ತಿ ವಹಿಸಬೇಕು. ಘನ, ದ್ರವ್ಯ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು. ಕಾರ್ಯಾಗಾರದಲ್ಲಿ ಪಡೆದುಕೊಂಡ ಮಾಹಿತಿಯನ್ನು ತಮ್ಮ ವ್ಯಾಪ್ತಿಯಲ್ಲಿ ಅನುಸರಿಸುವುದರ ಜತೆಗೆ ನಿಮ್ಮಲ್ಲಿನ ಯಶಸ್ವಿ ಕಾರ್ಯಕ್ರಮದ ಮಾಹಿತಿಯನ್ನು ಕೆಲವೇ ದಿನದಲ್ಲಿ ಇಲಾಖೆ ಸಚಿವರೊಂದಿಗೆ ಆಯೋಜಿಸಿರುವ ಸಭೆಯಲ್ಲಿ ನೀಡಬೇಕು ಎಂದು ಕೆ.ಯಾಲಕ್ಕಿಗೌಡ ಹೇಳಿದರು.
ಜಿ.ಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಧನರಾಜು, ಮುಖ್ಯ ಯೋಜನಾಧಿಕಾರಿ ಧನುಷ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಬಿ.ವಿ.ಪುರುಷೋತ್ತಮ್, ಬಿ.ಎನ್.ಐಶ್ವರ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಪ್ರತಿ ತಾಲೂಕಿಗೆ ಇಬ್ಬರಂತೆ ಸನ್ಮಾನ ಮಾಡಲಾಯಿತು.