

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಈ ಬಾರಿ ಕಡಿಮೆ ಸ್ಥಾನ ಬಂದಿದೆ ಎಂದು ದೃತಿಗೆಡಲ್ಲ ಇಂದಿನಿಂದಲೇ ಮತ್ತೆ ಪಕ್ಷ ಸಂಘಟನೆ ಮಾಡಿಕೊಂಡು ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಸದೃಢವಾಗಲಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು
ಚುನಾವಣೆ ಮುಗಿದ ಮೇಲೆ ಮಂಗಳವಾರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೆಲ ನಾಯಕರ ಮಾತುಗಳು ಮತ್ತು ವರ್ತನೆಯಿಂದ ಇಂದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಎಲ್ಲಾ ಕೈ ನಾಯಕರು ಬಿಜೆಪಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ವ್ಯಂಗ್ಯವಾಡಿದರು.
ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಪ್ರಾದೇಶಿಕ ಪಕ್ಷವನ್ನು ಮುಗಿಸಲು ಪ್ರಯತ್ನ ಪಟ್ಟರು. ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ಸೇರಿದಂತೆ ಹಲವು ಕೇಂದ್ರದ ನಾಯಕರು ಪ್ರಚಾರ ಮಾಡಿದರು. ಆದರೆ ಜನರು ಕೈ ಬಿಡಲಿಲ್ಲ, ಜಿಲ್ಲೆಯಲ್ಲಿ ಕೂಡ ನಾಲ್ಕು ಸ್ಥಾನವನ್ನು ಗೆದ್ದಿದ್ದೇವೆ. ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಜನರ ಸಮಸ್ಯೆಗೆ ದ್ವನಿಯಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸನವರು ಆಡಳಿತ ಪಕ್ಷದಲ್ಲಿದ್ದುಕೊಂಡು ಅವರು ಚುನಾವಣೆ ಪೂರ್ವದಲ್ಲಿ ಕೊಟ್ಟಂತಹ ಗ್ಯಾರಂಟಿ ಕಾರ್ಡ್‌ಗಳನ್ನ ಜನರಿಗೆ ಈಡೇರಿಸಲಿ ಎಂದರು
ಈ ಹಿಂದೆಯೂ ಕೂಡ ಜಿಲ್ಲೆ ಮತ್ತು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಪೂರ್ಣವಾಗಿ ಸೋಲು ಅನುಭವಿಸಿತ್ತು ಆದರೆ ಮತ್ತೆ ಜಿಲ್ಲೆಯಲ್ಲಿ ಹೇಳಕ್ಕೆ ಹೇಳುತ್ತಾನೆ ಗೆದ್ದಿರುವಂತಹ ಉದಾಹರಣೆಗಳಿವೆ. ಶೀಘ್ರದಲ್ಲಿ ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆದು ಮುಂದಿನ ಪಕ್ಷ ಚಟುವಟಿಕೆಗಳ ಬಗ್ಗೆ ಗಮನಹರಿಸಲಾಗುವುದು. ಜಿಲ್ಲೆಯಲ್ಲಿ ಕೂಡ ಕೆಲ ಸಣ್ಣಪುಟ್ಟ ವ್ಯತ್ಯಾಸಗಳಿದ್ದು, ಅವುಗಳನ್ನ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮವಹಿಸಲಾಗುವುದು ಎಂದು ಹೇಳಿದರು.
ಮಾದರಿ ಜಿಲ್ಲೆ ಮಾಡುವ ಆಸೆ ಇದೆ
ಹಾಸನವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿ ಇಡೀ ರಾಜ್ಯದಲ್ಲಿ ನಂಬರ್ ಒನ್ ಜಿಲ್ಲೆಯನ್ನಾಗಿ ಮಾಡಿ ತೋರಿಸುತ್ತೇನೆ ಎಂದು ರೇವಣ್ಣ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಅಭಿವೃದ್ಧಿಗೆ ಸಹಕಾರ ನೀಡಿದರೆ ಒಳ್ಳೆಯದು, ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮಗೂ ಕೂಡ ಸಮಯ ಬರುತ್ತದೆ. ಆಗ ಇಡೀ ಜಿಲ್ಲೆಯನ್ನ ರಾಜ್ಯವೇ ತಿರುಗಿ ನೋಡುವ ರೀತಿ ಕೆಲಸ ಮಾಡಿ ತೋರಿಸುತ್ತೇವೆ ಅದು ಐದು ವರ್ಷವಾಗಿರಬಹುದು ಅಥವಾ ಹತ್ತು ವರ್ಷವಾಗಿರಬಹುದು ನಾನು ಬದುಕಿರುವಾಗಲೇ ಇದನ್ನ ಮಾಡಿ ತೋರಿಸುತ್ತೇನೆ ಎಂದರು.
ಅಧಿಕಾರಿಗಳಿಗೆ ಸ್ವರೂಪ್ ಎಚ್ಚರಿಕೆ
ಚುನಾವಣೆ ಮುಗಿದ ಮೇಲೆ ಮಾಜಿ ಶಾಸಕರು ಕೆಲ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಿಂದಿನ ಕಳ್ಳ ಬಿಲ್ಲುಗಳಿಗೆ ಸಹಿ ಹಾಕಿಸಲು ಯತ್ನಿಸುತ್ತಿದ್ದಾರೆ ಇದು ನನ್ನ ಗಮನಕ್ಕೆ ಬಂದಿದೆ ಆದ್ದರಿಂದ ಜಿಲ್ಲೆಯ ಯಾವೊಬ್ಬ ಅಧಿಕಾರಿಯೂ ಕೆಲಸವಾಗದೇ ಇರುವ ಮತ್ತು ಕಳ್ಳ ಬಿಲ್ಲುಗಳಿಗೆ ಸಹಿ ಮಾಡಬಾರದು ಎಂದು ನೂತನ ಶಾಸಕ ಎಚ್.ಪಿ ಸ್ವರೂಪ್‌ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಾನು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಅಲ್ಲಿವರೆಗೂ ಯಾವೊಬ್ಬ ಅಧಿಕಾರಿವು ಕೂಡ ಯಾರ ಒತ್ತಡಕ್ಕೂ ಮಣಿಯದೇ ಕೆಲಸ ಮಾಡಿ ಎಂದು ಹೇಳಿದರು.