ದೃಢಸಂಕಲ್ಪದ ಪ್ರತೀಕವೇ ಭಗೀರಥ ಮಹರ್ಷಿ

bir bhagiratha
ಬೀರೂರು ಪುರಸಭೆ ಕಚೇರಿಯಲ್ಲಿ ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಜ್ಯೋತಿ, ಜಿ.ಪ್ರಕಾಶ್, ಮಾನಿಕ್ ಬಾಷಾ ಇತರರಿದ್ದರು.
Published on

ಬೀರೂರು: ಛಲದ ಮೂಲಕ ದೇವಗಂಗೆಯನ್ನು ಭೂಮಿಗೆ ಕರೆತಂದ ಭಗೀರಥ ಮಹರ್ಷಿಗಳು ಎಲ್ಲ ಸಾಧಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಛಲ ಹಾಗೂ ದೃಢಸಂಕಲ್ಪದ ಪ್ರತೀಕವೇ ಭಗೀರಥ ಮಹರ್ಷಿಗಳು ಎಂದು ಪುರಸಭಾಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.

ಪುರಸಭೆಯಲ್ಲಿ ಭಾನುವಾರ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮವ ಸಲ್ಲಿಸಿ ಮಾತನಾಡಿ, ಪೂರ್ವಜರ ಶಾಪದ ವಿಮೋಚನೆಗಾಗಿ ತಪಸ್ಸು ಮಾಡಿ ಗಂಗೆಯನ್ನು ಒಲಿಸಿಕೊಂಡು ಗಂಗೆಯ ಮಹತ್ವ ಮತ್ತು ಭೂರಮೆಗೆ ದೇವಗಂಗೆಯನ್ನು ಹರಿಸುವಲ್ಲಿ ಪಟ್ಟ ಶ್ರಮ, ಇದರಿಂದ ಮನುಕುಲದ ಒಳಿತಿಗೆ ಆದ ಮಹಾನ್ ಉಪಕಾರವನ್ನು ತಿಳಿಸಿದರು.

ಪ್ರತಿಯೊಬ್ಬರೂ ಸಾಧನೆ ಮಾಡಬೇಕಾದಲ್ಲಿ ಸತತ ಕಠಿಣ ಪರಿಶ್ರಮಪಟ್ಟರೆ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ. ಅಂಥ ಮಹಾಪುರುಷರ ಜಯಂತಿಗಳು ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಎಂದರು.

ಉಪ್ಪಾರ ಸಮಾಜದ ಮುಖಂಡ ಷಣ್ಮುಖಪ್ಪ ಮಾತನಾಡಿ, ಭಗೀರಥರ ಸಂದೇಶಗಳು ಇಂದಿಗೂ ಪ್ರಸ್ತುತ. ಅವರ ವಿಚಾರಗಳನ್ನು ಎಲ್ಲ ಸಮುದಾಯದವರೂ ಅರಿತು ಬಾಳಬೇಕಾಗಿದೆ. ಭಗೀರಥ ಪ್ರಯತ್ನ ಎಂಬುದು ಪ್ರತಿ ಮನೆಯಲ್ಲೂ ಇಂದಿಗೂ ಪ್ರಚಲಿತದಲ್ಲಿರುವ ನಾಣ್ಣುಡಿ. ಗಂಗೆಯನ್ನು ದೇವಲೋಕದಿಂದ ಭೂಮಿಗೆ ಇಳಿಸುವ ಅಸಾಧ್ಯವಾದದ್ದನ್ನು ಸಾಧಿಸಿದ ಮಹಾಪುರುಷ. ಅವರ ಆದರ್ಶಗಳನ್ನು ಇಂದಿನ ಸಮಾಜ ಅಳವಡಿಸಿಕೊಳ್ಳಬೇಕಿದೆ ಎಂದರು.

ಪುರಸಭೆ ಸದಸ್ಯೆ ಜ್ಯೋತಿ, ಮೋಹನ್‌ಕುಮಾರ್, ಲೋಕೇಶ್ಪ, ಜಿಮ್ ರಾಜು, ಆಶ್ರಯ ಸಮಿತಿಯ ಮುಬಾರಕ್, ಆರೋಗ್ಯಾಧಿಕಾರಿ ಲಕ್ಷ್ಮಣ್ ಅವರು ಭಗೀರಥರ ಬದುಕು ಹಾಗೂ ಋಷಿಮುನಿಗಳ ತಪಸ್ಸಿನ ಫಲದ ಕುರಿತು ಮಾತನಾಡಿದರು.

ಪುರಸಭೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಮಲ್ಲಿಕಾರ್ಜುನ್, ಕಾಂತರಾಜು, ರಮೇಶ್ ಹಾಗೂ ಮೋಹನ್‌ಕುಮಾರ್ ಅವರನ್ನು ಗೌರವಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಸದಸ್ಯ ಮಾನಿಕ್ ಬಾಷಾ, ನಾಮನಿರ್ದೇಶಿತ ಹಾಗೂ ಆಶ್ರಯ ಸಮಿತಿ ಸದಸ್ಯರು, ಮುಖಂಡರಾದ ಮಧು ಬಾವಿಮನೆ, ಕೃಷ್ಣಮೂರ್ತಿ, ಸಂತೋಷ್‌ಕುಮಾರ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net