

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೀವನದಲ್ಲಿ ಯಶಸ್ಸು ಹಾಗೂ ವೈಫಲ್ಯಗಳಿಂದ ನಾವು ಕಲಿಯುವುದು ಸಾಕಷ್ಟಿದೆ. ದೃಢಸಂಕಲ್ಪ, ಆತ್ಮವಿಶ್ವಾಸ, ಪರಿಶ್ರಮದಿಂದ ಯಾವ ಕಾರ್ಯದಲ್ಲಾದರೂ ಯಶಸ್ವಿಯಾಗಲು ಸಾಧ್ಯ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮಾಜಿ ನಿರ್ದೇಶಕ ಡಾ. ಅನುರಾಗ ಕುಮಾರ ಅಭಿಪ್ರಾಯಪಟ್ಟರು.
ತಾಲೂಕಿನ ಇಟ್ಟಿಗಟ್ಟಿ ಗ್ರಾಮ ಬಳಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯಲ್ಲಿ ಭಾನುವಾರ ಏರ್ಪಡಿಸಿದ್ದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿ ದಿಢೀರನೆ ಆಗುವ ಕೆಲಸವಲ್ಲ. ಸಾಕಷ್ಟು ಸಮಯ ಬೇಕಿದೆ. ಕೆಲವೊಮ್ಮೆ ಅಭಿವೃದ್ಧಿಗೆ ಜೀವಮಾನವೇ ಬೇಕಾಗಬಹುದು. ಹೀಗಾಗಿ ಪ್ರತಿ ವ್ಯಕ್ತಿಯಲ್ಲೂ ಛಲ, ತಾಳ್ಮೆ, ಪರಿಶ್ರಮ ಮುಖ್ಯ. ನಾವು ಮಾಡುವ ಕೆಲಸದ ಮೇಲೆ ಪ್ರೀತಿ ಇದ್ದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ದೇಶದ ಜನರಿಗೆ ಅನುಕೂಲ ಕಲ್ಪಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಯುವ ಪದವೀಧರರ ಮೇಲಿರುವ ದೊಡ್ಡ ಜವಾಬ್ದಾರಿ. ವೃತ್ತಿ ಜೀವನದಲ್ಲಿ ಅವಕಾಶಗಳು ಹಾಗೂ ಸವಾಲುಗಳು ಎದುರಾಗುವುದು ಸಹಜ. ಅವುಗಳನ್ನು ಧೈರ್ಯದಿಂದ ಎದುರಿಸಿ ಸರಿಯಾಗಿ ಅರಿತುವ ಕಾರ್ಯರೂಪಕ್ಕೆ ತರುವುದು ಪ್ರಮುಖ ಹಂತವಾಗಿದೆ ಎಂದರು.
ಹೈದ್ರಾಬಾದ್ ಐಐಐಟಿ ನಿರ್ದೇಶಕ ಪ್ರೊ.ಉದಯ ದೇಸಾಯಿ ಮಾತನಾಡಿ, ಪ್ರಸ್ತುತ ಹವಾಮಾನ ವೈಪರಿತ್ಯ ಜಾಗತಿಕ ಸಮಸ್ಯೆಯಾಗಿದೆ. ಇದನ್ನು ತಗ್ಗಿಸಲು ತಂತ್ರಜ್ಞಾನ ಅಭಿವೃದ್ಧಿ ಪಡಿಸುವತ್ತ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು. ಹವಾಮಾನ ವೈಪರಿತ್ಯಕ್ಕೆ ಭಾರತ ಸೇರಿ ಜಗತ್ತಿನ ಅನೇಕ ರಾಷ್ಟ್ರಗಳು ತಲ್ಲಣಸಿವೆ. ಮಾಹಿತಿ ಮತ್ತು ತಂತ್ರಜ್ಞಾನದ ಬೆಳವಣಿಗೆ ವೇಗವಾಗಿ ಆಗುತ್ತಿದ್ದರೂ, ಹವಾಮಾನ ವೈಪರಿತ್ಯ ಜಗತ್ತಿನ ರಾಷ್ಟ್ರಗಳಿಗೆ ಸಾವಲಾಗಿದೆ. ಪರಿಸರ ಸಮತೋಲ ಕಾಯುವುದು ಇಂದಿನ ಅಗತ್ಯವಾಗಿದೆ ಎಂದರು.
ಅಂಟ್ಲಾಟಿಕ್ ಸೇರಿ ವಿವಿಧ ಕಡೆಗಳಲ್ಲಿನ ಮಂಜುಗಡ್ಡೆ ಪರ್ವತಗಳು ಕರಗಿ, ಸಮುದ್ರದ ಮಟ್ಟ ಹೆಚ್ಚುತ್ತಿದೆ. ಇದರಿಂದ ಮಿತಿ ಮೀರಿದ ಉಷ್ಣತೆ, ವಿಪರೀತ ಮಳೆ, ನೆರೆಪ್ರವಾಹ, ಬರಗಾಲ, ಅತಿವೃಷ್ಟಿ-ಅನಾವೃಷ್ಟಿ ಇತ್ಯಾದಿ ದುಷ್ಪರಿಣಾಮ ಉಂಟಾಗುತ್ತಿವೆ. ಹವಾಮಾನ ವೈಪರಿತ್ಯ ನಿರ್ವಹಣೆಗೆ ಸೋಲಾರ ತಂತ್ರಜ್ಞಾನ, ಹೈಡ್ರೋಜನ್ ಬಳಕೆ ಹೆಚ್ಚಾಗಿದೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಪರಿಸರಕ್ಕೆ ಬಿಡುವ ಹಸಿರು ಮನೆ ಅನಿಲ ಕಡಿಮೆ ಮಾಡಬೇಕಿದೆ ಎಂದರು.
ಘಟಿಕೋತ್ಸವದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ 119, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ 32 ಸೇರಿ ಒಟ್ಟು 151 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಐಐಐಟಿ ರಜಿಸ್ಟ್ರಾರ್ ಚನ್ನಪ್ಪ ಅಕ್ಕಿ, ಪ್ರಾಧ್ಯಾಪಕ ಪ್ರೊ. ಎಸ್.ಎಸ್.ಜಮದಗ್ನಿ, ಡಾ.ರಾಜೇಂದ್ರ ಹೆಗಡೆ ಇದ್ದರು.