ದೂರುದಾರನೇ ಡಕಾಯಿತಿಯ ರೂವಾರಿ

26CBP1 (1)
Published on

ಚಿಕ್ಕಬಳ್ಳಾಪುರ : ತಾಲೂಕಿನ ಕೇತೇನಹಳ್ಳಿ ರಸ್ತೆಯಲ್ಲಿ ನಡೆದಿದ್ದ 7.91 ಲಕ್ಷ ರೂ.ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನೇ ಪ್ರಕಣದ ಪ್ರಮುಖ ರೂವಾರಿ ಎನ್ನುವುದನ್ನು ತನಿಖೆಯಲ್ಲಿ ಪತ್ತೆ ಹಚ್ಚಿರುವ ಗ್ರಾಮಾಂತರ ಠಾಣೆ ಪೊಲೀಸರು, ಆರು ಮಂದಿಯನ್ನು ಬಂಧಿಸಿದ್ದಾರೆ.

ಲೋಟಸ್ ಫಾರ್ಮ್ಸ್ ಕಂಪನಿಯ ಮೇಲ್ವಿಚಾರಕ ವೈ.ವಿ.ಉದಯ್ ಕುಮಾರ್ ಮತ್ತು ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿಯ ಪ್ರಶಾಂತ್, ನರಸಿಂಹಮೂರ್ತಿ, ಪೃಥ್ವೀರಾಜ್, ಕಿರಣ್, ನವೀನ್ ಕುಮಾರ್ ಬಂಧಿತರು.

ಆರೋಪಿಗಳಿಂದ 7.90 ಲಕ್ಷ ರೂ.ನಗದು, ಡಕಾಯಿತಿಗೆ ಬಳಸಿದ್ದ ಇನ್ನೋವಾ ಕಾರು, ದ್ವಿಚಕ್ರ ವಾಹನ, ಚಾಕು ಮತ್ತು 4 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ನಡೆದ 5 ದಿನದಲ್ಲಿ ಆರೋಪಿಗಳನ್ನು ಬಂಧಿಸಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತನಿಖಾ ತಂಡಕ್ಕೆ ಬಹುಮಾನ ವಿತರಿಸಿದ್ದಾರೆ.

ಘಟನೆ ಹಿನ್ನೆಲೆ : ಚಿಕ್ಕಬಳ್ಳಾಪುರ ತಾಲೂಕಿನ ಆನೆಮೊಡಗು, ಕೊತ್ತೂರು ಗೇಟ್ ಬಳಿಯ ಕೋಳಿ ಫಾರಂನಲ್ಲಿನ ಕೋಳಿಗಳನ್ನು ಮಾರಾಟ ಮಾಡಿದ 7.91 ಲಕ್ಷ ರೂ. ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಐವರು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಲೋಟಸ್ ಫಾರ್ಮ್ಸ್ ಕಂಪನಿ ಮೇಲ್ವಿಚಾರಕ ಉದಯ್ ಕುಮಾರ್ ಜು.21 ರಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆಗೆ ಡಿವೈಎಸ್ಪಿ ಕೆ.ರವಿಶಂಕರ್, ವೃತ್ತ ನಿರೀಕ್ಷಕ ಎಂ.ಎಂ.ಪ್ರಶಾಂತ್, ಸಬ್ ಇನ್‌ಸ್ಪೆಕ್ಟರ್ ಚೇತನ್ ಕುಮಾರ್ ನೇತೃತ್ವದ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಚಿಸಿದ್ದರು. ಈ ತಂಡ ಐವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದೆ. ಆಗ ಕಂಪನಿಯ ಮೇಲ್ವಿಚಾರಕನೇ ಹಣ ಡಕಾಯಿತಿಯ ಸಂಚು ರೂಪಸಿ, ಕಂಪನಿಯ ಲಕ್ಷಾಂತರ ರೂ. ಎಗರಿಸುವ ಉದ್ದೇಶದಿಂದ ಕಾರನ್ನು ಅಡ್ಡಗಟ್ಟಿ, ಚಾಕು ತೋರಿಸಿ ಹಣ ಕಿತ್ತುಕೊಳ್ಳುವ ನಾಟಕವಾಡಿ, ಠಾಣೆಗೆ ದೂರು ನೀಡಲಾಗಿತ್ತು ಎಂದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net