

ಬೆಳಗಾವಿ: ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬೆಂಗಳೂರು ಪೋಲಿಸ್ ಆಯುಕ್ತರಿಗೆ ನೀಡಿದ ದೂರನ್ನು ವಿರೋಧಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಹಿರಿಯ ಬಂಡಾಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು 40 ವರ್ಷಗಳ ಹಿಂದೆ ಬರೆದ ರತನಗರಿ ಎನ್ನುವ ಕಾದಂಬರಿ ಬರೆದಿದ್ದರು. ಅಲ್ಲಿನ ನಾಯಕ ಪಾತ್ರಾರಿ ಅಂದಿನ ಆಡಳಿತ ರೂಢ ವ್ಯವಸ್ಥೆಯನ್ನು ವಿಡಂಬಿಸಿ ಆಡಿದ ರಾಷ್ಟ್ರಗೀತೆಯ ದಾಟಿಯ ಸಾಲುಗಳನ್ನು ಇಟ್ಟುಕೊಂಡು ಇದೀಗ ಕೆಲವರು ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂದು ಬೆಂಗಳೂರಿನ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 50 ವರ್ಷಗಳಿಂದ ಬರಗೂರು ರಾಮಚಂದ್ರಪ್ಪ ಅವರ ಬರಹ, ಸಿನಿಮಾ, ಹೋರಾಟ ಮತ್ತು ಬದುಕು ಕರ್ನಾಟಕದ ಜನತೆಗೆ ತೆರೆದಿಟ್ಟ ಪುಸ್ತಕವಾಗಿದೆ. ಅವರು ನಾಡಪ್ರೇಮ ಮತ್ತು ದೇಶಕ್ತಿಯನ್ನು ಅನುಮಾನಿಸುವ ಪ್ರಶ್ನೆಯೇ ಇಲ್ಲ. ರತ ನಗರಿ ಕಾದಂಬರಿಯಲ್ಲಿನ ವಿವಾದಕ್ಕೀಡಾಗಿರುವ ಪದ್ಯದ ಸಾಲುಗಳ ಕುರಿತು ಬರಗೂರು ಅವರು ಈಗಾಗಲೇ ಸಷ್ಟನೆ ನೀಡಿ, ಅನುಮಾನ ನಿವಾರಿಸಿದ್ದಾರೆ.
ಆದರೂ ಅವರ ಮೇಲೆ ದೂರು ನೀಡಿ, ತೇಜೋವಧಗೆ ಯತ್ನಿಸಲಾಗಿದೆ. ಈ ದೂರನ್ನು ಮುಖಮಂತ್ರಿ ಅವರು ರದ್ದುಗೊಳಿಸಲು ನಿರ್ದೇಶನ ನೀಡಬೇಕೆಂದು ಮನವಿ ಯಲ್ಲಿ ಒತ್ತಾಯಿಸಿದ್ದಾರೆ. ಈ ವೇಳೆ ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕ ಡಾ. ಯಲ್ಲಪ್ಪ ಹಿಮ್ಮಡಿ, ದಲಿತ ಸಂಘರ್ಷ ಸಮಿತಿಯ ಮಲ್ಲೇಶ ಕುರಂಗಿ, ಎಂ.ಆರ್.ಕಲ್ಪತ್ರಿ, ರವಿ ಬಸ್ತವಾದಗಿ, ಶಿವಲೀಲಾ ಮಿಸಾಳೆ, ಮಾನವ ಬಂಧುತ್ವ ವೇದಿಕೆ ಸಂಚಾಲಕ ಪ್ರಕಾಶ ಬೊಮ್ಮನ್ನವರ, ಜಿ.ವಿ.ಕುಲಕರ್ಣಿ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಶಂಕರ ಬಾಗೇವಾಡಿ, ಕರ್ನಾಟಕ ರಕ್ಷಣಾ ವೇದಿಕೆಯ ಮಹಾದೇವ ತಳವಾರ, ರೆಹಮಾನ ಮೊಕಾಸಿ, ಬಂಡಾಯ ಸಾಹಿತ್ಯ ಸಂಘಟನೆಯ ದೇಮಣ್ಣ ಸೊಗಲದ, ಅಡಿವೆಪ್ಪ ಇಟಗಿ, ಸಂತೋಷ ನಾಯಕ ಹಾಗೂ ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಸೇರಿದಂತೆ ಇತರರಿದ್ದರು.