ದೂರು ಬಂದರೆ ಕ್ರಮ ಖಂಡಿತ

web1
ಸವದತ್ತಿ ತಾಲೂಕು ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ವಿಶ್ವಾಸ ವೈದ್ಯ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ, ತಾಪಂ ಇಒ ಯಶವಂತ ಕುಮಾರ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಇತರರು ಇದ್ದರು.
Published on

ಸವದತ್ತಿ: ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ. ಇಂತಹ ಅಧಿಕಾರಿಗಳು ಸುಧಾರಿಸಿಕೊಳ್ಳಬೇಕು. ಇಲ್ಲದಿದ್ದರೆ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಎಚ್ಚರಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಪರಿಹಾರ ಕಲ್ಪಿಸಲು ಶ್ರಮಿಸಬೇಕು. ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಿ. ಖಾಸಗಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ತಡೆಗೆ ಕ್ರಮ ವಹಿಸಿ. ಮಳೆ ಹೆಚ್ಚಾಗಿದ್ದರಿಂದ ಖುದ್ದು ಶಾಲೆಗಳಿಗೆ ಭೇಟಿ ನೀಡಿ ಕಟ್ಟಡ ದುರಸ್ತಿ ಕಡೆ ಗಮನ ಹರಿಸಿ. ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ದಾಖಲೆ ಒದಗಿಸುವಲ್ಲಿ ವಿಳಂಬವಾಗುತ್ತಿದೆ ಎಂಬ ದೂರುಗಳಿವೆ. ಯಾರಿಗೂ ಕಾಯಿಸಬೇಡಿ ಶೀಘ್ರವೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ. ಎಸ್‌ಎಲ್‌ಒ ಕ್ರಾಸ್ ರಸ್ತೆ ಬೇಗನೆ ಪೂರ್ಣ ಗೊಳಿಸಬೇಕು ಎಂದು ಸೂಚಿಸಿದರು.

ಮಬನೂರು ಕ್ರಾಸ್ ಮತ್ತು ಚೋಪ್ರಾ ಕಾಲೇಜಿನ ಎದುರಿಗೆ ಬಸ್ ನಿಲ್ಲಿಸದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಕುರಿತು ಕ್ರಮವಹಿಸಿ. ಯಾವುದೇ ಹಳೆಯ ರೂಟ್ ರದ್ದುಗೊಳಿಸಬೇಡಿ. ಸರ್ಕಾರಿ ಆಸ್ಪತ್ರೆ ಆವರಣ ಕೆಸರುಮಯವಾಗಿದ್ದು ಪ್ಲೇವರ್ಸ್ ಅಳವಡಿಸಿ, ಆನಿ ಅಗಸಿಯಲ್ಲಿನ ಅಲಾರಕಿ ಓಣಿಯ ರಸ್ತೆ ಮೂತ್ರ ವಿಸರ್ಜನೆಯಿಂದ ಕೂಡಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರಗೆ ಸೂಚಿಸಿದರು.

ತಾಪಂ ಇಒ ತರಾಟೆಗೆ: ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಪಿಡಿಒಗಳ ಮೇಲೆ ಯಾವುದೇ ಕ್ರಮ ವಿಧಿಸದಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಎಲ್ಲವೂ ನಮ್ಮಿಂದ ಹೇಳಿಸಿಕೊಳ್ಳುವ ಕೆಲಸವಾಗಬಾರದು ಎಂದು ತಾಪಂ ಇಒ ಯಶವಂತ ಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಆಸ್ಪತ್ರೆಗೆ ಸರಿಯಾಗಿ ಔಷಧ ಪೂರೈಸಿ. ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಪಠ್ಯಪುಸ್ತಕ, ಸಮವಸ ಪೂರೈಸಬೇಕು. ನರೇಗಾದಲ್ಲಿ ತೋಟಗಾರಿಕೆಗೆ ಹೆಚ್ಚಿನ ಪ್ರಾಶಾಸ್ತ್ಯವಿದೆ. ರೈತರಿಗೆ ತಿಳಿವಳಿಕೆ ಹೇಳುವ ಕೆಲಸವಾಗಬೇಕು. ಭಾಗ್ಯಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಹಣ ವಸೂಲಿ ನಡೆದಿದೆ. ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸರ್ಕಾರಿ ಯೋಜನೆ ಉಚಿತವಾಗಿಯೇ ತಲುಪಬೇಕು. ಅನಧಿಕೃತ ಮದ್ಯ ಮಾರಾಟದ ಬಗ್ಗೆ ಮಾಹಿತಿ ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ ಏಕೆ ಎಂದು ಅಬಕಾರಿ ಅಧಿಕಾರಿ ಶ್ರೀಶೈಲ ಅಕ್ಕಿ ಅವರನ್ನು ತರಾಟೆಗೆ ತೆಗೆದುಕೊಂಡರು. ಮಂಜೂರಾದ ಸ್ಮಶಾನ ಜಾಗವನ್ನು ಸರ್ವೇ ಮಾಡಿ ಪಂಚಾಯಿತಿ ವ್ಯಾಪ್ತಿಗೆ ನೀಡಿ ಎಂದು ತಹಸೀಲ್ದಾರ್ ಜೆ.ಬಿ.ಜಕ್ಕನಗೌಡ್ರ ಅವರಿಗೆ ಸೂಚಿಸಿದರು.

ಅಪೂರ್ಣ ಮಾಹಿತಿಯೊಂದಿಗೆ ಆಗಮಿಸಿದ ಪ್ರಮುಖ ಇಲಾಖೆ ಅಧಿಕಾರಿಗಳನ್ನು ಇಬ್ಬರೂ ಶಾಸಕರು ತರಾಟೆಗೆ ತೆಗೆದುಕೊಂಡರು.
ಆಡಳಿತಾಧಿಕಾರಿ ಸತೀಶಕುಮಾರ್ ಎಂ., ಯರಗಟ್ಟಿ ತಹಸೀಲ್ದಾರ್ ಚಂದ್ರಶೇಖರ ನಾಯಕ, ಮಹೇಶ ಚಿತ್ತರಗಿ, ಮೈತ್ರಾದೇವಿ ವಸದ, ಬಸವರಾಜ ಬಾಗಲ್, ವಿಜಯ ಸಂಗಪ್ಪಗೋಳ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net