ಕೊಳ್ಳೇಗಾಲ: ಖಾಲಿ ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಇಒ ಹಾಗೂ ವ್ಯಕ್ತಿಯೊಬ್ಬರ ನಡುವೆ ಮಾತಿನ ಚಕಮಕಿ ನಡೆದು ಪಟ್ಟಣ ಪೋಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ಸಲ್ಲಿಕೆಯಾಗಿದ್ದು, ಶುಕ್ರವಾರ ಪ್ರಕರಣ ಸುಖಾಂತ್ಯ ಕಂಡಿದೆ.
ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಗಡಿ ಅವರು ಜೂ.3 ರಂದು ಮಧ್ಯಾಹ್ನ ಕಚೇರಿಯಿಂದ ಊಟಕ್ಕೆ ತೆರಳುತ್ತಿದ್ದ ಸಮಯದಲ್ಲಿ ಕುಂತೂರು ಗ್ರಾಮದ ಎಸ್.ಗುರುಲಿಂಗಪ್ಪ ಅವರು ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ತಪ್ಪು ಮಾಹಿತಿ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದಾದ ಬಳಿಕ ಇಒ ಗುರುಶಾಂತಪ್ಪ ಬೆಳ್ಳುಂಗಡಿ, ಪೊಲೀಸ್ ಠಾಣೆಗೆ ತೆರಳಿ ನನ್ನ ಮೇಲೆ ಗುರುಲಿಂಗಪ್ಪ ಹಲ್ಲೆಗೆ ಮುಂದಾಗಿದ್ದಾ ರಲ್ಲದೆ, ಅಸಭ್ಯವಾಗಿ ವರ್ತಿಸಿ ನನ್ನ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಅಂತೆಯೇ, ಲೋಕಾಯುಕ್ತರಿಗೆ ನನ್ನ ನಿವೇಶನದ ಬಗ್ಗೆ ತಪ್ಪು ಮಾಹಿತಿ ನೀಡಿದ್ದೀರಿ. ನಿಮ್ಮ ಬಳಿ ಏನು ದಾಖಲೆ ಇದೆ ಕೊಡಿ ಎಂದು ಕೇಳಿದ ವಿಚಾರಕ್ಕೆ ನಾನು ಮಿಲಿಟರಿಯಲ್ಲಿದ್ದಾಗ ಪಾಕಿಸ್ತಾನದ ಉಗ್ರರನ್ನು ಗುಂಡಿಟ್ಟು ಕೊಂದಿದ್ದೇನೆ. ನಿನ್ನನ್ನು ಅದೇ ರೀತಿ ಗುಂಡಿಟ್ಟು ಕೊಲ್ಲುತ್ತೇನೆ ಎಂದು ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅವರು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಗುರುಲಿಂಗಪ್ಪ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಆ ಬಳಿಕ ಠಾಣೆಯ ಎಎಸ್‌ಐ ಶಂಕರ್‌ರಾಜ್ ದೂರು ಸ್ವೀಕರಿಸಿ ಮುಂದಿನ ಕ್ರಮ ಕೈಗೊಂಡಿದ್ದರು. ಶುಕ್ರವಾರ ರಾಜಕೀಯ ಮುಖಂಡರ ಸಮ್ಮುಖದಲ್ಲಿ ದೂರು-ಪ್ರತಿದೂರಿನ ವಿಚಾರಣೆ ನಡೆದಿದ್ದು, ಗುರುಲಿಂಗಪ್ಪ ಅವರ ಜತೆಗಿದ್ದ ರಾಜಕೀಯ ಮುಖಂಡರು ಇಒ ಗುರುಶಾಂತಪ್ಪ ಬೆಳ್ಳುಂಗಡಿ ಅವರ ಜತೆ ಚರ್ಚಿಸಿ ಪ್ರಕರಣವನ್ನು ರಾಜಿ ಮಾಡಿಸುವ ಮೂಲಕ ತೆರೆ ಎಳೆದಿದ್ದಾರೆ.