ದೂರು ನೀಡಿದರೆ ಮಕ್ಕಳ ರಕ್ಷಣೆ ಸಾಧ್ಯ

23 KAMPLI 04
Published on

ಕಂಪ್ಲಿ: ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣದಲ್ಲಿ ಮಕ್ಕಳ ಪಾತ್ರವೂ ಪ್ರಮುಖವಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಪ್ರೌಢಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಆಯೋಜಿಸಿದ್ದ ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ, ಮೂಢನಂಬಿಕೆಗಳು, ಮಕ್ಕಳ ಹಕ್ಕುಗಳ ರಕ್ಷಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಇಲ್ಲವೇ ಇಆರ್‌ಎಸ್‌ಎಸ್ 112 ಕ್ಕೆ ಕರೆ ಮಾಡಿ ದೂರು ಸಲ್ಲಿಸಬೇಕು. ಇದರಿಂದ ಹಕ್ಕುಗಳಿಂದ ವಂಚಿತರಾಗುವ ಮಕ್ಕಳ ಸಂರಕ್ಷಣೆ ಸಾಧ್ಯವಾಗಲಿದೆ ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಎಚ್.ಸಿ.ರಾಘವೇಂದ್ರ ಮಾತನಾಡಿ, ಮಕ್ಕಳು ಶಾಲೆಗಳಲ್ಲಿದ್ದರೆ ಹೆಚ್ಚಿನ ಸುರಕ್ಷತೆಯಲ್ಲಿರಲು ಸಾಧ್ಯ. ಮಕ್ಕಳ ರಕ್ಷಣೆಯೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕಿದೆ ಎಂದರು. ಪ್ರಾಚಾರ್ಯ ಮಹ್ಮದ್ ಶಫಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಬಸವರಾಜ ಪಾಟೀಲ್, ಅಧಿಕಾರಿಗಳಾದ ಲತೀಫಾ ಬೇಗಮ್, ಟಿ.ಎಂ.ಬಸವರಾಜ, ಎಚ್.ಈರಣ್ಣ, ಸುಜಾತಾ, ಯಲ್ಲಪ್ಪ, ದ್ರಾಕ್ಷಾಯಿಣಿ, ಅಪರಂಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net